ಹುಬ್ಬಳ್ಳಿ: ಲಾಕ್ ಮಾಡಿದ ಮನೆಗಳ ಕೀಲಿ ಮುರಿದು ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಅಂದಾಜು ರೂ. 3,45,000/- ಮೌಲ್ಯದ ಬಂಗಾರ, ಬೆಳ್ಳಿಯ ಒಡವೆಗಳು ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀಕಾಂತ ಸಿದ್ದಪ್ಪ ಕರಗುಪ್ಪಿ (36, ಸಾ: ನ್ಯೂ ಆನಂದನಗರ, ಹಳೇಹುಬ್ಬಳ್ಳಿ) ಮತ್ತು ಪ್ರವೀಣ ಯಲ್ಲಪ್ಪ ಅಂಗಡಿ (36, ಸಾ: ಆನಂದನಗರ 2ನೇ ಕ್ರಾಸ್, ಹಳೇಹುಬ್ಬಳ್ಳಿ) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ:
ಇತ್ತೀಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದನಗರ ಮರಿಯಮ್ಮ ದೇವಸ್ಥಾನದ ಹತ್ತಿರವಿರುವ ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿತ್ತು.
ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ:
ಮಾನ್ಯ ಪೊಲೀಸ್ ಆಯುಕ್ತರು, ಹು-ಧಾ, ಉಪ ಪೊಲೀಸ್ ಆಯುಕ್ತರು (ಕಾ.ಸು.), ಡಿಸಿಪಿ (ಅವ.ಸಂ.) ಹಾಗೂ ಸಹಾಯಕ ಪೊಲೀಸ್ ಆಯುಕ್ತರು (ದಕ್ಷಿಣ ಉಪ ವಿಭಾಗ) ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಎಂ.ಎನ್. ಸಿಂಧೂರ ನೇತೃತ್ವದಲ್ಲಿ, ಪಿ.ಎಸ್.ಐ.ಗಳಾದ ಶ್ರೀ ವಿಶ್ವನಾಥ ಆಲಮಟ್ಟಿ, ಶ್ರೀ ಮಂಜುನಾಥ ಟಿ.ಎಂ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಾಗೂ ಕಳುವಾದ ಒಟ್ಟು 3.45 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಧಿಕಾರಿಗಳ ಪ್ರಶಂಸೆ:
ಈ ಯಶಸ್ವಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಇನ್ಸ್‌ಪೆಕ್ಟರ್ ಎಂ.ಎನ್. ಸಿಂಧೂರ, ಪಿಎಸ್‌ಐಗಳು ಹಾಗೂ ಸಿಬ್ಬಂದಿಗಳಾದ ಕಟ್ನಳ್ಳಿ, ಚಂಡೂನವರ, ಮೊಟೆಬೆನ್ನೂರ, ಹೊಸಮನಿ, ಕೆಂಚಣ್ಣನವರ, ರಗಣಿ, ಕಲ್ಲನಗೌಡ ಹಾಗೂ ಪಾಲಯ್ಯ ಅವರ ಕರ್ತವ್ಯದಕ್ಷತೆಯನ್ನು ಹು-ಧಾ ಮಾನ್ಯ ಪೊಲೀಸ್ ಆಯುಕ್ತರು ವಿಶೇಷವಾಗಿ ಶ್ಲಾಘಿಸಿರುತ್ತಾರೆ.
Arakshakara Times Media
Related posts
