ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಪೊಲೀಸರು, ಕುಖ್ಯಾತ ಕಳ್ಳನನ್ನು ಬಂಧಿಸಿ ಒಟ್ಟು ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಮೂಲದ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ ಏನು?
ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಯಮ್ಮನಹಳ್ಳಿ ಗ್ರಾಮದ ಶಾರದಮ್ಮ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕನ್ನ ಹಾಕಿದ್ದ ಕಳ್ಳರು, 35 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಹಾಗೂ ₹80,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರಣಿ ಕಳ್ಳತನ ಪ್ರಕರಣಗಳು ಪತ್ತೆ
ಮನೆಯಲ್ಲಿ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬೆನ್ನುಬಿದ್ದ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ತಳಕು ಮಾತ್ರವಲ್ಲದೆ, ಮೊಳಕಾಲ್ಮೂರು ಹಾಗೂ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಕಳ್ಳತನ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ.
ಕಾರ್ಯಾಚರಣೆಯ ನೇತೃತ್ವ
ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ತಳಕು ಪೊಲೀಸ್ ಠಾಣೆಯ ಸಿಪಿಐ ಹನುಮಂತಪ್ಪ ಹಾಗೂ ಪಿಎಸ್ಐ ಶಿವಕುಮಾರ್ ನೇತೃತ್ವದ ಸಿಬ್ಬಂದಿ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಕುಖ್ಯಾತ ಕಳ್ಳನನ್ನು ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Arakshakara Times Media
Related posts
