ನಗರದಲ್ಲಿ ಅಕ್ರಮವಾಗಿ ರಕ್ತಚಂದನದ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 7.12 ಲಕ್ಷ ಮೌಲ್ಯದ 285 ಕೆಜಿ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಮಾರ್ಚ್ 11ರಂದು ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿಯ ಅರಣ್ಯ ಸರ್ವೀಸ್ ರಸ್ತೆಯಲ್ಲಿ ಚೀಲವೊಂದರಲ್ಲಿ ರಕ್ತಚಂದನದ ತುಂಡುಗಳನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬ ಮಾರಾಟಕ್ಕೆ ನಿಂತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ದಾಳಿ ನಡೆಸಿದ ಮಡಿವಾಳ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದರು. ಆತನ ಬಳಿಯಿದ್ದ ಚೀಲವನ್ನು ತಪಾಸಣೆ ನಡೆಸಿದಾಗ 10 ಕೆಜಿ ತೂಕದ 3 ರಕ್ತಚಂದನದ ತುಂಡುಗಳು ಪತ್ತೆಯಾಗಿವೆ. ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದಾಗ, ಹೆಚ್ಚಿನ ಹಣದ ಆಸೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಶ್ಯಾನುಭೋಗನಹಳ್ಳಿಯ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ಹೆಚ್ಚಿನ ಪ್ರಮಾಣದ ರಕ್ತಚಂದನವನ್ನು ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ. ಆತ ನೀಡಿದ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಅಲ್ಲಿಂದ 275 ಕೆಜಿ ತೂಕದ 13 ರಕ್ತಚಂದನದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಆಗ್ನೇಯ ವಿಭಾಗದ ಡಿಸಿಪಿ ಶ್ರೀ. ಮೊಹಮ್ಮದ್ ಸುಜೀತ ಎಂ ಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಎಸಿಪಿ ಶ್ರೀ. ವಾಸುದೇವ್ ವಿ ಕೆ ಅವರ ನೇತೃತ್ವದಲ್ಲಿ ಮಡಿವಾಳ ಇನ್ಸ್ಪೆಕ್ಟರ್ ಶ್ರೀ. ಮೊಹಮ್ಮದ್ ಎಂ ಎ ಮತ್ತು ತಂಡ ನಡೆಸಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್