Share News

*ಜೈಲಿನಲ್ಲಿದ್ದರೂ ಕಸಬು ಬಿಡದ ಆರೋಪಿ, ಕದ್ದು ಕಾರಾಗೃಹದಲ್ಲಿದ್ದವನಿಗೆ ಬಾಡಿ ವಾರೆಂಟ್, ರಾಮಮೂರ್ತಿನಗರ ರಕ್ಷಕರಿಂದ ರೋಚಕ ಜಯ*

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರದಲ್ಲಿ ನಡೆದಿದ್ದ ಐಫೋನ್ ಸುಲಿಗೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ತನಿಖೆ ಆರಂಭಿಸಿದ ಪೊಲೀಸರು, ಡಿ ಜೆ ಹಳ್ಳಿಯಲ್ಲಿ ಕಳವು ಮಾಡಿದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು (ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ) ಮಾರ್ಚ್ 3 ರಂದು ಬಂಧಿಸಿದರು. ಇವರಿಂದ 9 ಗ್ರಾಂ ಚಿನ್ನದ ಸರ ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಇವರು ನೀಡಿದ ಮಾಹಿತಿಯ ಆಧಾರದ ಮೇಲೆ, ಈಗಾಗಲೇ ಬೇರೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುಖ್ಯ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈತ ಬೆಂಗಳೂರಿನ ವಿವಿಧೆಡೆ ಮೊಬೈಲ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಈತನ ಸ್ನೇಹಿತರಿಂದ ಮೈಸೂರಿನಲ್ಲಿ ಮತ್ತೆ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 2,30,000 ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ರಾಮಮೂರ್ತಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ. ವಿಕ್ರಮ ಅಮಟೆ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಉಮಾಶಂಕರ್ ಎ ಎನ್ ಹೆಚ್ ಅವರ ನೇತೃತ್ವದಲ್ಲಿ ಈ ತಂಡವು ಕಾರ್ಯನಿರ್ವಹಿಸಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ಸತೀಶ್ ಜಿ ಜೆ ಮತ್ತು ಅವರ ತಂಡವು ಅತ್ಯಂತ ಶ್ರಮವಹಿಸಿ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News