Share News

ಚಿಕ್ಕೋಡಿ: ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಆಯತಪ್ಪಿ 70 ಅಡಿ ಆಳದ ಬಾವಿಗೆ ಬಿದ್ದಿದ್ದ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬೆಳಕೂಡ ಗ್ರಾಮದ ರೈತ ಅಣ್ಣಪ್ಪ ಹಂಚಿನಾಳೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ರೈತನು ಪಕ್ಕದ ಜಮೀನಿನಲ್ಲಿ ಎತ್ತುಗಳ ಸಹಾಯದಿಂದ ನೇಗಿಲು ಹೊಡೆಯುತ್ತಿದ್ದರು. ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಎತ್ತುಗಳನ್ನು ಮೇಯಲು ಬಿಟ್ಟಿದ್ದಾಗ, ನೀರು ಅರಸಿ ಹೋದ ಎತ್ತು ಅಣ್ಣಪ್ಪ ಅವರಿಗೆ ಸೇರಿದ 70 ಅಡಿ ಆಳದ ತೆರೆದ ಬಾವಿಗೆ ಆಯತಪ್ಪಿ ಬಿದ್ದಿದೆ.

ಬಾವಿಯಲ್ಲಿ ಎತ್ತು ಬಿದ್ದಿರುವುದನ್ನು ಗಮನಿಸಿದ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಶ್ರಮವಹಿಸಿ ಕಾರ್ಯಾಚರಣೆ ನಡೆಸಿದರು. ಬಾವಿಯ ಆಳ ಹೆಚ್ಚಾಗಿದ್ದರಿಂದ ಎತ್ತನ್ನು ಮೇಲೆತ್ತಲು ಹಗ್ಗ ಹಾಗೂ ಕ್ರೇನ್ ಮಾದರಿಯ ವ್ಯವಸ್ಥೆಯನ್ನು ಬಳಸಲಾಯಿತು. ಕೊನೆಗೂ ಯಾವುದೇ ಪ್ರಾಣಾಪಾಯವಿಲ್ಲದಂತೆ ಎತ್ತನ್ನು ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು.

ಸುಮಾರು 70 ಅಡಿ ಆಳದ ಬಾವಿಗೆ ಬಿದ್ದರೂ ಎತ್ತು ಜೀವಂತವಾಗಿ ಪಾರಾಗಿರುವುದು ರೈತ ಕುಟುಂಬದಲ್ಲಿ ಸಂತಸ ತಂದಿದೆ. ಸಮಯಪ್ರಜ್ಞೆ ಮೆರೆದು ಎತ್ತಿನ ಪ್ರಾಣ ಉಳಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯವೈಖರಿಗೆ ಬೆಳಕೂಡ ಗ್ರಾಮಸ್ಥರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 


Share News