Share News

ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮನಃಪರಿವರ್ತನೆ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ವಿಶೇಷ ‘ವಿಪಶ್ಯನ’ ಧ್ಯಾನ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಾರಾಗೃಹದ ಒಟ್ಟು 25 ಮಂದಿ ಸಜಾ ಕೈದಿಗಳು ಈ ವಿಶಿಷ್ಟ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಾನಸಿಕ ಶಾಂತಿ ಮತ್ತು ಕೋಪ ನಿಯಂತ್ರಣದ ಪಾಠಗಳನ್ನು ಕಲಿತಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (DGP) ಅಲೋಕ್ ಕುಮಾರ್ ಅವರ ಪ್ರತ್ಯಕ್ಷ ಮಾರ್ಗದರ್ಶನ ಹಾಗೂ ವಿಶೇಷ ಕಾಳಜಿಯೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಅಪರಾಧ ಪ್ರವೃತ್ತಿಯಿಂದ ದೂರ ಸರಿದು, ಜೈಲಿನ ನಾಲ್ಕು ಗೋಡೆಗಳ ಮಧ್ಯೆ ನಲುಗುತ್ತಿರುವ ಕೈದಿಗಳಲ್ಲಿ ಮಾನಸಿಕ ಸ್ಥಿರತೆ, ಕೋಪ ನಿಯಂತ್ರಣ, ಒತ್ತಡ ರಹಿತ ಜೀವನ ಹಾಗೂ ಉನ್ನತ ಮಾನವೀಯ ಮೌಲ್ಯಗಳನ್ನು ಬಿತ್ತಲು ಈ ತರಬೇತಿಯನ್ನು ನೀಡಲಾಯಿತು.

​ಪ್ರಖ್ಯಾತ ವಿಪಶ್ಯನ ತರಬೇತುದಾರರಾದ ಡಾ. ಹೆಚ್.ಎಸ್. ಕೆಂಪಯ್ಯ, ಧಮ್ಮ ಸೇವಕರಾದ ಧರ್ಮಬೋಧಿ ಹಾಗೂ ಹರ್ಷ ಕೃಷ್ಣ ಹೆಚ್.ಎಸ್ ಅವರ ಸಮರ್ಥ ನೇತೃತ್ವದಲ್ಲಿ 10 ದಿನಗಳ ಕಾಲ ನಿರಂತರವಾಗಿ ಈ ಧ್ಯಾನ ತರಗತಿಗಳು ನಡೆದವು.

ಶಿಬಿರ ಮುಕ್ತಾಯದ ಬಳಿಕ ಭಾಗವಹಿಸಿದ್ದ 10 ಮಂದಿ ಕೈದಿಗಳಿಂದ ವಿಶೇಷ ಸಾಕ್ಷ್ಯ ಹಾಗೂ ಅನಿಸಿಕೆಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲರೂ ಸಕಾರಾತ್ಮಕ ಬದಲಾವಣೆಯ ಅನುಭವ ಹಂಚಿಕೊಂಡಿದ್ದಾರೆ.

​”ಜೀವನದಲ್ಲಿ ಮುಕ್ತಿಯಿಂದ ನೆಮ್ಮದಿಯಾಗಿ ಹೇಗೆ ಬದುಕಬೇಕು, ಕ್ರೋಧ-ಕೋಪವಿಲ್ಲದೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಮತ್ತು ಅಸಲಿ ಮನುಷ್ಯತ್ವ ಎಂದರೇನು ಎಂಬುದನ್ನು ನಾವು ಈ 10 ದಿನಗಳ ವಿಪಶ್ಯನ ಧ್ಯಾನದಲ್ಲಿ ಕಲಿತಿದ್ದೇವೆ. ಇದು ನಮ್ಮ ಬದುಕಿನ ಹೊಸ ದಾರಿಗೆ ದೀಪವಾಗಿದೆ” ಎಂದು ಕೈದಿಗಳು ಭಾವನಾತ್ಮಕವಾಗಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

ಶಿಬಿರದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಪಾಲ್ಗೊಂಡು, ಸಕಾರಾತ್ಮಕ ಬದಲಾವಣೆಯ ಹಾದಿಗೆ ಮರಳುತ್ತಿರುವ ಕೈದಿಗಳ ಈ ಪ್ರಯತ್ನವನ್ನು ಕಾರಾಗೃಹ ಮತ್ತು ಪೊಲೀಸ್ ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ. ಪ್ರೋತ್ಸಾಹದ ರೂಪವಾಗಿ ಹಾಗೂ ಅವರ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಅನುವಾಗುವಂತೆ, ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ 25 ಸಜಾ ಕೈದಿಗಳಿಗೆ ತಲಾ 15 ದಿನಗಳ ವಿಶೇಷ ಪೆರೋಲ್ (ರಜೆ) ಮಂಜೂರು ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

​ಜೈಲು ಹಕ್ಕಿಗಳಲ್ಲಿ ಮಾನವೀಯತೆಯ ನಡವಳಿಕೆ ಮೂಡಿಸುವ ಇಂತಹ ವಿಪಶ್ಯನ ಧ್ಯಾನ ಶಿಬಿರಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿದ್ದು, ಕೈದಿಗಳ ಸಂಪೂರ್ಣ ಮನಃಪರಿವರ್ತನೆಗೆ ಇಲಾಖೆ ಶ್ರಮಿಸುತ್ತಿದೆ.

 


Share News