ಬೆಂಗಳೂರು: ರಾಜಧಾನಿಯ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಮಾರನಹಳ್ಳಿಯಲ್ಲಿ ಸಿನಿಮಾ ಶೈಲಿಯ ಭೀಕರ ದರೋಡೆ (Robbery) ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಂಬಿದ ಗೆಳೆಯನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮುಖ್ಯ ಸೂತ್ರಧಾರ ಮೇಸ್ತ್ರಿ ಹಾಗೂ ಆತನ ಇಬ್ಬರು ಪಂಟರ್ಸ್ಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಹಣದ ವಿಚಾರ ಹಾಗೂ ನಿರಂತರ ಕಿರಿಕ್ ಈ ಇಡೀ ಅವಾಂತರಕ್ಕೆ ಮುಖ್ಯ ಕಾರಣವಾಗಿದೆ.
ಪ್ರಕರಣದ ಮುಖ್ಯ ಆರೋಪಿ ಮೇಸ್ತ್ರಿ ಗುರುಪ್ರಸಾದ್, ಆತನಿಂದ ರಾಬರಿ ತರಬೇತಿ ಪಡೆದಿದ್ದ ಅರ್ಬಾಜ್ ಮತ್ತು ಜಿಬ್ರಾನ್ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ ಕದ್ದ ಮುದ್ದೆಮಾಲನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ದೂರುದಾರ ಸುದರ್ಶನ್ ಹಾಗೂ ಮೇಸ್ತ್ರಿ ಗುರುಪ್ರಸಾದ್ ಆಪ್ತ ಗೆಳೆಯರಾಗಿದ್ದರು. ಸುದರ್ಶನ್ ಮತ್ತು ಆತನ ತಂದೆ ಕೃಷ್ಣಚಾರಿ ಅವರು ಹುಣಸಮಾರನಹಳ್ಳಿಯಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು, ಸ್ನೇಹಿತನೆಂಬ ನಂಬಿಕೆಯ ಮೇಲೆ ಅದರ ಕಾಂಟ್ರಾಕ್ಟ್ ಅನ್ನು ಗುರುಪ್ರಸಾದ್ಗೆ ನೀಡಿದ್ದರು. ಗುರುಪ್ರಸಾದ್ ಸಹ ಸ್ನೇಹಕ್ಕಾಗಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣಕ್ಕೆ ಒಪ್ಪಿಕೊಂಡು ಕೆಲಸ ಆರಂಭಿಸಿದ್ದ.
ಆದರೆ, ದಿನ ಕಳೆದಂತೆ ಮನೆ ಬಳಿ ಬರುತ್ತಿದ್ದ ತಂದೆ ಕೃಷ್ಣಚಾರಿ ಮತ್ತು ಮಗ ಸುದರ್ಶನ್, ಮೇಸ್ತ್ರಿ ಜೊತೆ ನಿರಂತರ ಕಿರಿಕ್ ತೆಗೆಯುತ್ತಿದ್ದರು. “ಕೆಲಸ ಸರಿ ಇಲ್ಲ, ಅದನ್ನು ಸರಿಯಾಗಿ ಕಟ್ಟಿಲ್ಲ” ಎಂದು ಕ್ಯಾತೆ ತೆಗೆಯುವುದಲ್ಲದೆ, ಒಪ್ಪಿಕೊಂಡ ಪೂರ್ತಿ ಹಣ ನೀಡುವುದಿಲ್ಲ ಎಂದು ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಮಾನಸಿಕ ಬೇಸರ ಹಾಗೂ ನಷ್ಟಕ್ಕೊಳಗಾಗಿದ್ದ ಗುರುಪ್ರಸಾದ್, ಗೆಳೆಯನಿಗೆ ತಕ್ಕ ಪಾಠ ಕಲಿಸಲು ದರೋಡೆಯ ಸ್ಕೆಚ್ ಹಾಕಿದ್ದ.
ಗೆಳೆಯನ ಮನೆಯನ್ನು ಲೂಟಿ ಮಾಡಲು ಪ್ಲಾನ್ ಮಾಡಿದ ಗುರುಪ್ರಸಾದ್, ತನ್ನ ಬಳಿಯೇ ಕೆಲಸ ಮಾಡುತ್ತಿದ್ದ ಅರ್ಬಾಜ್ ಮತ್ತು ಜಿಬ್ರಾನ್ ಎಂಬ ಇಬ್ಬರು ಯುವಕರನ್ನು ಬಳಸಿಕೊಂಡಿದ್ದ. ಅವರಿಗೆ ದರೋಡೆ ಮಾಡುವುದು ಹೇಗೆ ಎಂದು ಖುದ್ದಾಗಿ ತರಬೇತಿ (Training) ನೀಡಿ ಸಿದ್ಧಪಡಿಸಿದ್ದ.
ಅದರಂತೆ, ಕಳೆದ ಏಪ್ರಿಲ್ 18 ರಂದು ಕೃಷ್ಣಾಚಾರಿ ಅವರ ಮನೆಗೆ ನುಗ್ಗಿದ್ದ ಈ ಇಬ್ಬರು ದರೋಡೆಕೋರರು, ಮನೆಯಲ್ಲಿದ್ದವರ ಮೇಲೆ ಚಾಕು ಝಳಪಿಸಿ, ಪ್ರಾಣ ಬೆದರಿಕೆ ಹಾಕಿ ಭೀಕರ ದರೋಡೆ ನಡೆಸಿದ್ದರು. ಮನೆಯಲ್ಲಿದ್ದ 79 ಗ್ರಾಂ ಚಿನ್ನದ ಆಭರಣಗಳು, 64 ಗ್ರಾಂ ಬೆಳ್ಳಿ ಹಾಗೂ ಬರೋಬ್ಬರಿ ₹12 ಲಕ್ಷ ನಗದು ಹಣವನ್ನು ದೋಚಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದರು. ದರೋಡೆಯ ನಂತರ ಸಿಕ್ಕಿಬೀಳಬಾರದೆಂದು ಆರೋಪಿಗಳು ಎರಡು ಪ್ರತ್ಯೇಕ ತಂಡಗಳಾಗಿ ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ನಿರಂತರ ತಾಂತ್ರಿಕ ತನಿಖೆ ಹಾಗೂ ಹಗಲಿರುಳು ನಡೆಸಿದ ಹುಡುಕಾಟದ ಫಲವಾಗಿ ಸದ್ಯ ಮೂವರೂ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಂಬಿದ ಗೆಳೆಯನೇ ದ್ವೇಷ ಸಾಧಿಸಲು ಕೂಲಿ ಕಾರ್ಮಿಕರನ್ನು ಬಳಸಿ ದರೋಡೆ ಮಾಡಿಸಿದ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.