ತಾವರೆಕೆರೆ: ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ ಕಳವು ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಿಗಾನಹಟ್ಟಿ ಗ್ರಾಮದ ನಿವಾಸಿಯೊಬ್ಬರು, ದಿನಾಂಕ: 26.06.2026 ರಂದು ತಮ್ಮ ಮನೆಯ ಮುಂಭಾಗ ಎಂದಿನಂತೆ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಆದರೆ, ತಡರಾತ್ರಿ ಹೊಂಚು ಹಾಕಿದ ಕಳ್ಳರು ಮನೆಯ ಮುಂದೆ ಲಾಕ್ ಮಾಡಲಾಗಿದ್ದ ಬೈಕನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ವಾಹನದ ಮಾಲೀಕರು ತಾವರೆಕೆರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ದಾಖಲಿಸಿದ್ದರು.
ಸಂತ್ರಸ್ತರ ದೂರಿನ ಮೇರೆಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 148/2026, ಕಲಂ: 303(2) BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
ಠಾಣೆಯ ಪ್ರಮುಖ ಅಧಿಕಾರಿಗಳ ನೇತೃತ್ವದಲ್ಲಿ ರಚನೆಗೊಂಡಿದ್ದ ವಿಶೇಷ ಸಿಬ್ಬಂದಿಗಳ ತಂಡವು ತಾಂತ್ರಿಕ ಸೂತ್ರಗಳು ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತದನಂತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಸತ್ಯಾಂಶ ಬಯಲಾಗಿದ್ದು, ಅವರಿಂದ ಕದ್ದಿದ್ದ ದ್ವಿಚಕ್ರ ವಾಹನವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರ ಆಸ್ತಿಗೆ ಕನ್ನ ಹಾಕುತ್ತಿದ್ದ ಕಳ್ಳರನ್ನು ದೂರು ದಾಖಲಾದ ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ, ಕಳುವಾಗಿದ್ದ ವಾಹನವನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷತೆ ಮೆರೆದ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತನಿಖಾ ತಂಡದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ :- ಗಿಲ್ಬರ್ಟ್. ಜೆ