ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ಹಾಗೂ ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಈಗ ಮತ್ತೊಂದು ಭಾರೀ ಆಘಾತ ಎದುರಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಕಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ವಿವಿಧ ತಳಿಯ ಅಕ್ಕಿಗಳ ಬೆಲೆ ಪ್ರತಿ ಕೆ.ಜಿಗೆ ₹10ರಿಂದ ₹20ರವರೆಗೆ ದುಬಾರಿಯಾಗಿದೆ.
ಮಾರುಕಟ್ಟೆಯಲ್ಲಿ ಅಕ್ಕಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಪೂರೈಕೆಯ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೋಲ್ಸೇಲ್ ಹಾಗೂ ರಿಟೇಲ್ ವ್ಯಾಪಾರಿಗಳು ವಿಶ್ಲೇಷಿಸಿದ್ದಾರೆ. ಇದರ ಜೊತೆಗೆ, ಕೇಂದ್ರ ಸರ್ಕಾರವು ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಮುಕ್ತ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಕ್ಕಿಯ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿದೆ. ಈ ಕೊರತೆಯೇ ದರಗಳು ಗಗನಕ್ಕೇರಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಪ್ರಮುಖ ತಳಿಯ ಅಕ್ಕಿಗಳ ಪರಿಷ್ಕೃತ ದರಗಳ ಪಟ್ಟಿ ಈ ಕೆಳಗಿನಂತಿದೆ:
ಸ್ಟೀಮ್ ರೈಸ್: ₹42 ಇದ್ದ ದರ ಸದ್ಯ ₹56 ಕ್ಕೆ ಏರಿಕೆಯಾಗಿದೆ.
ರಾ ರೈಸ್ (ಹಸಿ ಅಕ್ಕಿ): ₹50 ಇದ್ದ ದರ ಸದ್ಯ ₹62 ಕ್ಕೆ ಹೆಚ್ಚಳವಾಗಿದೆ.
ಕೋಲಂ ರೈಸ್: ₹68 ಇದ್ದ ದರ ಸದ್ಯ ಬರೋಬ್ಬರಿ ₹80 ಕ್ಕೆ ಜಿಗಿದಿದೆ.
ಕೋಲಂ ಸ್ಟೀಮ್ ರೈಸ್: ₹55 ಇದ್ದ ದರ ಸದ್ಯ ₹65 ಕ್ಕೆ ಏರಿಕೆಯಾಗಿದೆ.
ಅಗತ್ಯ ವಸ್ತುಗಳ ಸರಣಿ ಬೆಲೆ ಏರಿಕೆಯಿಂದಾಗಿ ಈಗಾಗಲೇ ತಿಂಗಳ ಬಜೆಟ್ ಸರಿದೂಗಿಸಲು ಹರಸಾಹಸ ಪಡುತ್ತಿದ್ದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ, ನಿತ್ಯದ ಅನ್ನಕ್ಕೂ ಕಾಸು ಹೆಚ್ಚು ಮಾಡಬೇಕಾಗಿ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದಿನನಿತ್ಯದ ಕನಿಷ್ಠ ವೆಚ್ಚಗಳನ್ನು ನಿಭಾಯಿಸುವುದೇ ಕಷ್ಟಕರವಾಗುತ್ತಿದ್ದು, ಸರ್ಕಾರಗಳು ತಕ್ಷಣವೇ ಮಾರುಕಟ್ಟೆ ದರ ನಿಯಂತ್ರಣಕ್ಕೆ ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ಹಾಗೂ ಆಗ್ರಹ ಕೇಳಿಬಂದಿದೆ.
Arakshakara Times Media
Related posts
