Share News

ಹೈದರಾಬಾದ್: ಸಿನೆಮಾ ಶೈಲಿಯಲ್ಲಿ ಮಾರುವೇಷ ಧರಿಸಿ ಖುದ್ದು ರಿಯಾಲಿಟಿ ಚೆಕ್‌ಗೆ ಇಳಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು, ಪಬ್ ಹೆಸರಿನಲ್ಲಿ ಹೈಟೆಕ್ ಆಗಿ ನಡೆಯುತ್ತಿದ್ದ ಬೃಹತ್ ಸೆಕ್ಸ್ ದಂಧೆ ಜಾಲವನ್ನು (Sex Racket) ಧೂಳೀಪಟ ಮಾಡಿದ್ದಾರೆ. ಹೈದರಾಬಾದ್‌ನ ಐಷಾರಾಮಿ ಪ್ರದೇಶದಲ್ಲಿರುವ ‘ಕಿಂಗ್ಸ್ & ಕ್ವೀನ್ಸ್ ಪಬ್’ (Kings & Queens Pub) ಮೇಲೆ ಡಿಸಿಪಿ ರಿತಿ ರಾಜ್ (DCP Riti Raj) ನಡೆಸಿರುವ ಈ ರೋಮಾಂಚಕ ರಹಸ್ಯ ಕಾರ್ಯಾಚರಣೆ (Undercover Operation) ಈಗ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.

ಖಾಸಗಿ ಪಬ್‌ಗೆ ಬರುವ ಶ್ರೀಮಂತ ಯುವಕರನ್ನು ಸೆಳೆಯಲು ಮತ್ತು ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಲು ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದವು. ಪಬ್ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ಮತ್ತು ಹೈಟೆಕ್ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ಸಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಖಚಿತ ಮಾಹಿತಿ ಕಲೆಹಾಕಲು ಸ್ವತಃ ಡಿಸಿಪಿ ರಿತಿ ರಾಜ್ ಅವರೇ ಖುದ್ದಾಗಿ ರಂಗಕ್ಕಿಳಿಯಲು ನಿರ್ಧರಿಸಿದರು.

ಯಾರಿಗೂ ಸಣ್ಣ ಸುಳಿವು ಅಥವಾ ಅನುಮಾನ ಬಾರದಂತೆ ಸಾಮಾನ್ಯ ಮಹಿಳೆಯಂತೆ ವೇಷ ಧರಿಸಿದ ಐಪಿಎಸ್ ಅಧಿಕಾರಿ ರಿತಿ ರಾಜ್, ಗ್ರಾಹಕಿಯಂತೆ ಪಬ್‌ನೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ರಹಸ್ಯ ಮತ್ತು ಅಕ್ರಮ ಚಟುವಟಿಕೆಗಳನ್ನು ತಾವೇ ನಿಂತು ಸೂಕ್ಷ್ಮವಾಗಿ ಗಮನಿಸಿದ ಅಧಿಕಾರಿ, ಸಾಕ್ಷ್ಯ ಸಮೇತ ಪಕ್ಕಾ ಮಾಹಿತಿ ಕಲೆಹಾಕಿದ್ದಾರೆ. ದಂಧೆ ನಡೆಯುತ್ತಿರುವುದು ಸಂಪೂರ್ಣವಾಗಿ ಖಚಿತವಾಗುತ್ತಿದ್ದಂತೆ, ತಮ್ಮ ವಿಶೇಷ ಪೊಲೀಸ್ ತಂಡಕ್ಕೆ ದಾಳಿ ಮಾಡುವಂತೆ ಸೈರನ್ ಸಂದೇಶ ರವಾನಿಸಿದ್ದಾರೆ.

ಡಿಸಿಪಿ ರಿತಿ ರಾಜ್ ಅವರಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಪಬ್ ಮೇಲೆ ಮುಗಿಬಿದ್ದ ಪೊಲೀಸರು ದಿಢೀರ್ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಬ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕರಾಳ ದಂಧೆ ಸಾಕ್ಷ್ಯ ಸಮೇತ ಬಯಲಾಗಿದ್ದು, ಸ್ಥಳದಲ್ಲಿದ್ದ ನಾಲ್ವರು ಮಹಿಳೆಯರು ಹಾಗೂ ಐವರು ಪುರುಷರು ಸೇರಿದಂತೆ ಒಟ್ಟು 9 ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.

​ಈ ‘ಕಿಂಗ್ಸ್ & ಕ್ವೀನ್ಸ್ ಪಬ್’ ವಿರುದ್ಧ ಈ ಹಿಂದೆಯೂ ಕೂಡ ಹಲವು ಕಾನೂನುಬಾಹಿರ ಚಟುವಟಿಕೆಗಳ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿ (PITA) ಗಂಭೀರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಎಸಿ ರೂಂ ಬಿಟ್ಟು, ಜೀವದ ಹಂಗು ತೊರೆದು ಸಾಮಾನ್ಯರಂತೆ ಮಾರುವೇಷದಲ್ಲಿ ಅಪ್ರತಿಮ ಸಾಹಸ ಪ್ರದರ್ಶಿಸಿದ ಲೇಡಿ ಐಪಿಎಸ್ ಅಧಿಕಾರಿ ರಿತಿ ರಾಜ್ ಅವರ ಧೈರ್ಯ ಮತ್ತು ದಕ್ಷತೆಗೆ ಈಗ ಸಾರ್ವಜನಿಕ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

 


Share News