ವಿಜಯಪುರ: ಗೋವಾದಿಂದ ಮಹಾರಾಷ್ಟ್ರಕ್ಕೆ ಲಾರಿಯಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟಿ ಕೋಟಿ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಂತರರಾಜ್ಯ ಮದ್ಯ ಮಾಫಿಯಾದ ಹೈಟೆಕ್ ದಂಧೆಯ ನೆಟ್ವರ್ಕ್ ಬಯಲಾಗಿದೆ.
ವಿಜಯಪುರ ಜಿಲ್ಲೆಯ ಕೋಲ್ಹಾರ ಟೋಲ್ ಗೇಟ್ ಬಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ಯಶಸ್ವಿ ದಾಳಿ ಸಂಘಟಿಸಿದ್ದಾರೆ.
ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಆರಂಭದಲ್ಲಿ ಚಾಲಕರು ಇದು ಎರೆಹುಳು ಗೊಬ್ಬರದ ಲೋಡ್ ಎಂದು ನಂಬಿಸಲು ಯತ್ನಿಸಿದ್ದಾರೆ. ಆದರೆ, ಅನುಮಾನಗೊಂಡು ಪೊಲೀಸರು ಲಾರಿಯಲ್ಲಿದ್ದ ಗೊಬ್ಬರದ ಚೀಲಗಳನ್ನು ಕೆಳಗಿಳಿಸಿ ಕೂಲಂಕಷವಾಗಿ ಪರಿಶೀಲಿಸಿದಾಗ ಅಸಲಿ ಕೃತ್ಯ ಬೆಳಕಿಗೆ ಬಂದಿದೆ. ಗೊಬ್ಬರದ ಚೀಲಗಳ ಒಳಭಾಗದಲ್ಲಿ ಕೋಟಿ ಕೋಟಿ ಮೌಲ್ಯದ ಮದ್ಯದ ಬಾಕ್ಸ್ಗಳನ್ನು ಅತ್ಯಂತ ಗುಪ್ತವಾಗಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಪೊಲೀಸರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಈ ಮದ್ಯ ಮಾಫಿಯಾ ಹೈಟೆಕ್ ತಂತ್ರಜ್ಞಾನ ಬಳಸಿತ್ತು. ಲಾರಿಯ ಒಬ್ಬ ಚಾಲಕನಿಗೆ ಒಂದು ನಿರ್ದಿಷ್ಟ ಜಿಪಿಎಸ್ (GPS) ಲೊಕೇಶನ್ ಮಾತ್ರ ನೀಡಲಾಗುತ್ತಿತ್ತು. ಆತ ಆ ಜಾಗ ತಲುಪಿದ ತಕ್ಷಣ ಮತ್ತೊಬ್ಬ ಚಾಲಕ ಬಂದು ಲಾರಿಯ ನಿಯಂತ್ರಣ ಪಡೆದುಕೊಳ್ಳುತ್ತಿದ್ದ. ಹೀಗೆ ಹತ್ತಾರು ಚಾಲಕರನ್ನು ಬದಲಾಯಿಸುತ್ತಾ, ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿ ಗೋವಾದಿಂದ ಮಹಾರಾಷ್ಟ್ರದತ್ತ ಲಾರಿಯನ್ನು ಸಾಗಿಸಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಈ ಕಾರ್ಯಾಚರಣೆಯಲ್ಲಿ ಒಟ್ಟು 12,952 ಲೀಟರ್ಗೂ ಅಧಿಕ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಮದ್ಯದಲ್ಲಿ:
290 ಬಾಕ್ಸ್ ಮ್ಯಾನ್ಷನ್ ಹೌಸ್ ಬ್ರಾಂಡಿ
397 ಬಾಕ್ಸ್ ರಾಯಲ್ ಬ್ಲೂ
800 ಬಾಕ್ಸ್ ರಾಯಲ್ ಸೆಲೆಕ್ಟ್ ಮದ್ಯ ಸೇರಿದೆ.
ವಶಪಡಿಸಿಕೊಳ್ಳಲಾದ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ಲಾರಿ ಸೇರಿ ಒಟ್ಟು ₹1.65 ಕೋಟಿ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೂರು ಜಿಲ್ಲೆಗಳ ಕಣ್ತಪ್ಪಿಸಿ ಅಕ್ರಮ ಎಸಗುತ್ತಿದ್ದ ಈ ಅಂತರರಾಜ್ಯ ಮದ್ಯ ಮಾಫಿಯಾ ಜಾಲವನ್ನು ಯಶಸ್ವಿಯಾಗಿ ಭೇದಿಸಿರುವ ವಿಜಯಪುರ ಪೊಲೀಸರು, ಸದ್ಯ ಪ್ರಕರಣ ದಾಖಲಿಸಿಕೊಂಡು ಈ ಹೈಟೆಕ್ ದಂಧೆಯ ಹಿಂದಿರುವ ಕಿಂಗ್ಪಿನ್ ಹಾಗೂ ಇತರ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

