ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಬೃಹತ್ ಮಾದಕ ವಸ್ತು ಜಾಲವನ್ನು ಭೇದಿಸುವಲ್ಲಿ ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಅಕ್ರಮವಾಗಿ ನೆಲೆಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮೂವರು ನೈಜೀರಿಯಾ ಮೂಲದ ಅಂತರರಾಷ್ಟ್ರೀಯ ಪೆಡ್ಲರ್ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ ₹21 ಕೋಟಿ ಮೌಲ್ಯದ 10 ಕೆಜಿ 270 ಗ್ರಾಂ ಎಂಡಿಎಂಎ (MDMA) ಕ್ರಿಸ್ಟಲ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಲಗೇಜ್ ಬ್ಯಾಗ್ಗಳ ರಹಸ್ಯ ಖಾನೆಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಮಾದಕ ವಸ್ತುಗಳನ್ನು ಅಡಗಿಸಿಕೊಂಡು ಬೆಂಗಳೂರಿಗೆ ತರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲಕೊನೆಹಳ್ಳಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ವಾಸವಿದ್ದರು. ಈ ಮನೆಯನ್ನೇ ಕೇಂದ್ರವಾಗಿಸಿಕೊಂಡು ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಐಟಿ ಕಂಪನಿಗಳ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ನೆಟ್ವರ್ಕ್ ಬೆಳೆಸಿದ್ದರು. ಅಲ್ಲಿಂದಲೇ ಭಾರೀ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಪಿಗಳ ಕೃತ್ಯದ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದ ಸಿಸಿಬಿ ತಂಡವು ದಾಳಿ ನಡೆಸಿ ಮೂವರನ್ನೂ ಹೆಡೆಮುರಿ ಕಟ್ಟಿದೆ. ಬಂಧಿತರಿಂದ ಡ್ರಗ್ಸ್ ಮಾತ್ರವಲ್ಲದೆ 4 ಮೊಬೈಲ್ ಫೋನ್ಗಳು, 2 ದ್ವಿಚಕ್ರ ವಾಹನಗಳು ಹಾಗೂ ದಂಧೆಗೆ ಬಳಸುತ್ತಿದ್ದ ಇತರೆ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ನೈಜೀರಿಯಾದ ಇತರ ಪ್ರಮುಖ ಡ್ರಗ್ಸ್ ಪೆಡ್ಲರ್ಗಳಿಂದ ನೇರವಾಗಿ ಈ ಎಂಡಿಎಂಎ ಕ್ರಿಸ್ಟಲ್ ಅನ್ನು ತರಿಸಿಕೊಂಡು ಬೆಂಗಳೂರಿನಲ್ಲಿ ನೆಟ್ವರ್ಕ್ ಮೂಲಕ ವಿತರಣೆ ಮಾಡುತ್ತಿದ್ದರು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿಗಳು ವೈದ್ಯಕೀಯ (Medical) ಹಾಗೂ ಪ್ರವಾಸಿ (Tourist) ವೀಸಾದಡಿ ಭಾರತಕ್ಕೆ ಬಂದಿದ್ದರು. ಆದರೆ ವೀಸಾ ಅವಧಿ ಮುಗಿದ ಬಳಿಕವೂ ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಈ ಕರಾಳ ದಂಧೆ ಮುಂದುವರಿಸಿದ್ದರು.
ಪ್ರಸ್ತುತ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬೃಹತ್ ಜಾಲದ ಹಿಂದೆ ದೇಶೀಯ ಹಾಗೂ ವಿದೇಶಿ ಮಟ್ಟದಲ್ಲಿ ಇನ್ಯಾರೆಲ್ಲಾ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.