Share News

ದೊಡ್ಡಬಳ್ಳಾಪುರ: ಲೇಔಟ್‌ನಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ 14 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಅಂತರ್ ಜಿಲ್ಲಾ ಸರಗಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವಾಗಿದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಆದೇಶದಂತೆ ವಾರಸುದಾರರಿಗೆ ಒಡವೆಯನ್ನು ಮರಳಿ ಹಸ್ತಾಂತರಿಸಲಾಗಿದೆ.

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಯ ನಿವಾಸಿಯಾದ ಉಮೇಶ್ ಎಂಬುವವರು ಕಳೆದ ಜೂನ್ 21ರ ರಾತ್ರಿ 8 ಗಂಟೆಯ ಸುಮಾರಿಗೆ ತಮ್ಮ ಸ್ನೇಹಿತನೊಂದಿಗೆ ನಿಜಗಲ್ ಲೇಔಟ್‌ಗೆ ಹೋಗಿದ್ದರು. ಸ್ನೇಹಿತ ಅಲ್ಲಿಂದ ತೆರಳಿದ ನಂತರ ಉಮೇಶ್ ಅವರು ಒಬ್ಬರೇ ನಡೆದುಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ, ಒಂಟಿಯಾಗಿದ್ದನ್ನು ಗಮನಿಸಿದ ಇಬ್ಬರು ಖದೀಮರು ಅವರನ್ನು ಅಡ್ಡಗಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಉಮೇಶ್ ಅವರ ಕರಳಿನಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ಸರಗಳ್ಳತನ ನಡೆದ ಕೇವಲ ಒಂದು ಗಂಟೆಯಲ್ಲೇ ಉಮೇಶ್ ಅವರಿಗೆ ನಗರದ ಸಹ್ಯಾದ್ರಿ ಆಸ್ಪತ್ರೆಯ ಬಳಿ ಅದೇ ಸರಗಳ್ಳರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಹಿಡಿಯಲು ಉಮೇಶ್ ಮುಂದಾದಾಗ, ಆರೋಪಿಗಳು ಉಮೇಶ್ ಅವರನ್ನು ತಳ್ಳಿ ತಮ್ಮ ‘ಡಿಯೋ’ ಗಾಡಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.

​ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದ ಉಮೇಶ್, ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದ ಜಾಗರೂಕತೆಯಲ್ಲೇ ತಮ್ಮ ಮೊಬೈಲ್ ಫೋನ್‌ನಲ್ಲಿ ಆ ಡಿಯೋ ಗಾಡಿಯ ನಂಬರ್ ಅನ್ನು ಫೋಟೋ ತೆಗೆದು ಸೆರೆಹಿಡಿದುಕೊಂಡಿದ್ದರು. ಇದೇ ನಂಬರ್ ಆಧರಿಸಿ ಉಮೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು, ದೂರುದಾರರು ನೀಡಿದ ಡಿಯೋ ವಾಹನದ ನಂಬರ್ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತೀವ್ರ ಜಾಲ ಬೀಸಿದ್ದರು. ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳಾದ ಆಕಾಶ್ ಮತ್ತು ಸುಮನ್ ಎಂಬ ಇಬ್ಬರು ಸರಗಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಡಿಯೋ ಗಾಡಿ ಹಾಗೂ ಸಾರ್ವಜನಿಕರಿಂದ ದೋಚಿದ್ದ 14 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯದ ಆದೇಶದನ್ವಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಆದ ಡಾ. ಎಂ.ಬಿ. ನವೀನ್ ಕುಮಾರ್ ಅವರು ವಶಪಡಿಸಿಕೊಂಡಿದ್ದ ಚಿನ್ನದ ಸರವನ್ನು ಅಧಿಕೃತವಾಗಿ ದೂರುದಾರರಾದ ಉಮೇಶ್ ಅವರಿಗೆ ಮರಳಿ ಹಸ್ತಾಂತರಿಸಿದರು.

​ಸಮಯಪ್ರಜ್ಞೆ ಮೆರೆದ ದೂರುದಾರನ ನಡೆ ಹಾಗೂ ದೂರು ಬಂದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಒಡವೆ ಪತ್ತೆಹಚ್ಚಿದ ಗ್ರಾಮಾಂತರ ಪೊಲೀಸರ ಶೀಘ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 


Share News