Share News

ರಾಬರ್ಟ್‌ಸನ್‌ಪೇಟೆ (ಕೆ.ಜಿ.ಎಫ್): ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ೫ ಪ್ರಮುಖ ಕನ್ನ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿರುವ ಪೊಲೀಸರು ಅಂತರರಾಜ್ಯ ಕಳ್ಳರು ಸೇರಿದಂತೆ ಸ್ಥಳೀಯವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಬರೋಬ್ಬರಿ ₹೭೮.೬೮ ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

​ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಖಚಿತ ಮಾಹಿತಿ ಹಾಗೂ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಕಳ್ಳರು ಹಾಗೂ ಅವರಿಗೆ ಸಾಥ್ ನೀಡಿದ್ದ ಸ್ಥಳೀಯ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

​ವಶಪಡಿಸಿಕೊಂಡ ಕದ್ದ ಮಾಲಿನ ವಿವರ:

ಬಂಧಿತ ಆರೋಪಿಗಳಿಂದ ಪೊಲೀಸರು ₹೭೮.೬೮ ಲಕ್ಷ ಮೌಲ್ಯದ ೫೬೨ ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ₹೮೦,೦೦೦ ಮೌಲ್ಯದ ಬೆಳ್ಳಿಯ ಒಡವೆ ಮತ್ತು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

​ಅಂತರರಾಜ್ಯ ಕಳ್ಳರ ಜಾಲವನ್ನು ಯಶಸ್ವಿಯಾಗಿ ಭೇದಿಸಿ, ಭಾರಿ ಪ್ರಮಾಣದ ಕದ್ದ ಮಾಲನ್ನು ವಶಪಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ಸ್ವತ್ತನ್ನು ರಕ್ಷಿಸಿದ ರಾಬರ್ಟ್‌ಸನ್‌ಪೇಟೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಶ್ಲಾಘನೆ ವ್ಯಕ್ತವಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರಿಂದ ಇನ್ನಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ.

 


Share News