Share News

ಬೆಂಗಳೂರು: ಸಾಲದ ರೂಪದಲ್ಲಿ ಬೇಕರಿ ಪದಾರ್ಥಗಳನ್ನು ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪುಂಡರ ಗುಂಪೊಂದು ಬೇಕರಿ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಧ್ವಂಸ ಮಾಡಿರುವ ಘಟನೆ ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

​ಆರ್‌ಟಿ ನಗರ ಬಳಿ ಇರುವ ‘ಮಂಜುನಾಥ ಕಾಂಡಿಮೆಂಟ್ಸ್’ ಮಾಲೀಕ ಚಂದ್ರಶೇಖರ ಶೆಟ್ಟಿ ಹಲ್ಲೆಗೊಳಗಾದ ದುರದೃಷ್ಟಕರ ವ್ಯಕ್ತಿಯಾಗಿದ್ದಾರೆ.

​ದಿನಸಿ ಹಾಗೂ ಬೇಕರಿ ಪದಾರ್ಥಗಳನ್ನು ಖರೀದಿಸಲು ಬಂದಿದ್ದ ಪುಂಡರು, ಸಾಲವಾಗಿ ವಸ್ತುಗಳನ್ನು ನೀಡುವಂತೆ ಚಂದ್ರಶೇಖರ ಶೆಟ್ಟಿ ಅವರ ಬಳಿ ಪಟ್ಟು ಹಿಡಿದಿದ್ದಾರೆ. ಆದರೆ ಸಾಲ ನೀಡಲು ಮಾಲೀಕರು ನಿರಾಕರಿಸಿದಾಗ ಕ್ಷುಲ್ಲಕ ಕಾರಣಕ್ಕೆ ಉದ್ವಿಗ್ನಗೊಂಡ ಪುಂಡರು, ಏಕಾಏಕಿ ಮಾರಕಾಸ್ತ್ರಗಳಿಂದ ಮಾಲೀಕರ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ.

​ಅಷ್ಟಕ್ಕೇ ನಿಲ್ಲದೆ, ಅಂಗಡಿಯಲ್ಲಿದ್ದ ಬೇಕರಿ ತಿಂಡಿಗಳು, ಗಾಜಿನ ಕೌಂಟರ್‌ಗಳು ಹಾಗೂ ಸಾಮಗ್ರಿಗಳನ್ನು ತೀವ್ರವಾಗಿ ಜಜ್ಜಾಡಿ ಧ್ವಂಸಗೊಳಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಾಲೀಕ ಚಂದ್ರಶೇಖರ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಪುಂಡರ ಪತ್ತೆಗೆ ಜಾಲ ಬೀಸಿದ್ದಾರೆ.

 


Share News