Share News

ಕಲಬುರಗಿ: ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನೊಬ್ಬನನ್ನು ಅಶೋಕ ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂದಿತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 117 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.

​ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ ಆಟೋ ಚಾಲಕ ಸೈಯದ್ ಹಮೀದ್ (46) ಬಂಧಿತ ಆರೋಪಿ.

​ಮನೆ ಬೀಗ ಮುರಿದು ಕಳವು: ಕಳೆದ 29-05-2025 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:45 ರ ನಡುವೆ, ದೂರುದಾರರು ಹಾಗೂ ಅವರ ತಾಯಿ ಮನೆಯಲ್ಲ ಇಲ್ಲದ ಸಮಯ ನೋಡಿ ಖದೀಮ ಬಾಗಿಲ ಬೀಗ ಮುರಿದು ಒಳನುಗ್ಗಿದ್ದನು.

​ದೂರು ಹಾಗೂ ಪ್ರಕರಣ ದಾಖಲು: ಬೆಡ್‌ರೂಮ್‌ನಲ್ಲಿದ್ದ ಅಲಮಾರುಗಳನ್ನು ಜಾಲಾಡಿ ನಗದು ಹಣ, ಬೆಳ್ಳಿ ಸಾಮಗ್ರಿಗಳು ಹಾಗೂ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದನು. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ. 91/2025, BNS ಕಲಂ 331(4), 305) ಪ್ರಕರಣ ದಾಖಲಾಗಿತ್ತು.

​ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ಮಾರ್ಗದರ್ಶನದಲ್ಲಿ, ಡಿಸಿಪಿಗಳಾದ ಶ್ರೀಮತಿ ಶಾಲೂ, ಪ್ರವೀಣ ಹೆಚ್. ನಾಯಕ್, ಎಸಿಪಿ ಶರಣಬಸಪ್ಪ ಸುಬೇದಾರ ಹಾಗೂ ಅಶೋಕ ನಗರ ಪಿಐ ಸತೀಶ ಕಣಿಮೇಶ್ವರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

​ಸಿಡಿಆರ್ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಅಶೋಕ ನಗರ ಠಾಣೆಯ 02 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

​ಆರೋಪಿಯಿಂದ 20,00,000/- ಮೌಲ್ಯದ 117 ಗ್ರಾಂ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.


Share News