ಚನ್ನಗಿರಿ (ದಾವಣಗೆರೆ): ತಾಲೂಕಿನ ಬಸವಾಪಟ್ಟಣ ಸಮೀಪದ ಸಾಗರಪೇಟೆ ಗ್ರಾಮದಲ್ಲಿ ರಾತ್ರಿ ವೇಳೆ ಆಹಾರ ಅರಸಿ ಬಂದ ಚಿರತೆಯೊಂದು, ಮನೆಯ ಮುಂಭಾಗದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಎತ್ತೊಯ್ದಿರುವ ಘಟನೆ ನಡೆದಿದೆ.
ಸಾಗರಪೇಟೆ ಮುಖ್ಯ ರಸ್ತೆಯಲ್ಲಿರುವ ರೈತ ಕೊಟ್ಟೂರ ಹಾಲೇಶ್ ಎಂಬುವರ ಮನೆಯ ಕಾಂಪೌಂಡ್ ಹಾರಿದ ಚಿರತೆ, ಬಾಗಿಲ ಬಳಿ ಮಲಗಿದ್ದ ಸಾಕು ನಾಯಿಯನ್ನು ಕ್ಷಣಾರ್ಧದಲ್ಲಿ ಕೊಂಡೊಯ್ದಿದೆ. ಈ ಇಡೀ ಭೀಕರ ದೃಶ್ಯ ಮನೆಯ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಗ್ರಾಮದ ಸಮೀಪದಲ್ಲೇ ಗುಡ್ಡವಿರುವ ಕಾರಣ, ಆಹಾರ ಹುಡುಕಿಕೊಂಡು ಚಿರತೆ ರಾತ್ರಿ ವೇಳೆ ಜನವಸತಿ ಪ್ರದೇಶಕ್ಕೆ ಬಂದಿದೆ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯೊಂದನ್ನು ಸೆರೆ ಹಿಡಿದಿದ್ದರು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.