ಬೆಂಗಳೂರು: ಬೆಲೆಬಾಳುವ ಕಾರುಗಳ ಮೇಲಿರುವ ಸಾಲ (ಲೋನ್) ತೀರಿಸುವುದಾಗಿ ನಂಬಿಸಿ ವಾಹನಗಳನ್ನು ಪಡೆದು, ನಕಲಿ ಆರ್‌ಸಿ (RC) ಕಾರ್ಡ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ₹1.74 ಕೋಟಿ ಮೌಲ್ಯದ 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯೊಬ್ಬರು ತಮಗೆ ಸೇರಿದ ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರಿನ ಲೋನ್ ಪಾವತಿಸುವುದಾಗಿ ನಂಬಿಸಿ ಕಾರನ್ನು ಪಡೆದುಕೊಂಡು, ಲೋನ್ ಪಾವತಿಸದೆ ಹಾಗೂ ಕಾರನ್ನೂ ವಾಪಸ್ ನೀಡದೆ ವಂಚಿಸಿದ್ದಾರೆಂದು ಜುಲೈ 13, 2026 ರಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಜುಲೈ 16, 2026: ಖಚಿತ ಮಾಹಿತಿ ಆಧರಿಸಿ ಯಶವಂತಪುರದ ಎಸ್‌ಬಿಎಂ ಕಾಲೋನಿ ಬಳಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು. ಆತನ ನೀಡಿದ ಸುಳಿವು ಆಧರಿಸಿ ಜುಲೈ 17 ರಂದು ರಾಮನಗರದ ಗೌಡಯ್ಯನದೊಡ್ಡಿಯ ಬಳಿ ಮತ್ತೊಬ್ಬ ಸಹಚರನನ್ನು ಬಂಧಿಸಲಾಯಿತು.
10 ದಿನಗಳ ಪೊಲೀಸ್ ಕಸ್ಟಡಿ: ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆ, ಕಾರುಗಳ ಲೋನ್ ಪಾವತಿಸುವುದಾಗಿ ಮಾಲೀಕರನ್ನು ನಂಬಿಸಿ ಪಡೆದು, ನಕಲಿ ಆರ್‌ಸಿ ಕಾರ್ಡ್, ನಂಬರ್ ಪ್ಲೇಟ್ ಹಾಗೂ ಮಾಲೀಕರ ವಿವರಗಳನ್ನು ಬದಲಾಯಿಸಿ ವಂಚಿಸುತ್ತಿದ್ದುದಾಗಿ ಒಪ್ಪಿಕೊಂಡರು.
ಇಬ್ಬರು ಸಹಚರರ ಬಂಧನ: ಜುಲೈ 21, 2026 ರಂದು ಕೆ.ಚನ್ನಸಂದ್ರದ ಪೂಜಾ ಗಾರ್ಡನ್ ಹಾಗೂ ಕೆ.ಆರ್.ಪುರದ ಮಂಜುನಾಥ ನಗರದ ಬಳಿ ಇನ್ನು ಇಬ್ಬರು ಸಹಚರರನ್ನು ಬಂಧಿಸಲಾಯಿತು.
ಬಂಧಿತ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯಂತೆ, ಜುಲೈ 17 ರಿಂದ ಜುಲೈ 23 ರ ಅವಧಿಯಲ್ಲಿ ವಿವಿಧ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದ್ದ ₹1,74,00,000/- (ಒಂದು ಕೋಟಿ ಎಪ್ಪತ್ತನಾಲ್ಕು ಲಕ್ಷ ರೂಪಾಯಿ) ಮೌಲ್ಯದ 08 ವಿವಿಧ ನಮೂನೆಯ ಬೆಲೆಬಾಳುವ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ನಾಲ್ಕೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ವಶಪಡಿಸಿಕೊಂಡ ಕಾರುಗಳ ಪೈಕಿ 02 ಕಾರುಗಳ ಮಾಲೀಕರು ಪತ್ತೆಯಾಗಿದ್ದು, ಉಳಿದ 06 ಕಾರುಗಳ ಮಾಲೀಕರು ಹಾಗೂ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಮೊಹಮ್ಮದ್ ಸುಜೀತಾ.ಎಂ.ಎಸ್, IPS ರವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಶ್ರೀ ವಾಸುದೇವ.ವಿ.ಕೆ ರವರ ನೇತೃತ್ವದಲ್ಲಿ, ಆಡುಗೋಡಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರವಿ.ಜಿ.ಕೆ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
