Share News

ಚಿಕ್ಕಮಗಳೂರು: ನಗರದಲ್ಲಿ ಕೃತಕ ರಾಸಾಯನಿಕಗಳನ್ನು ಬಳಸಿ ನಕಲಿ ನಾಟಿ ತುಪ್ಪ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.

​ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆಯ ಅಧಿಕಾರಿ ನಾಗರತ್ನ ಅವರ ನೇತೃತ್ವದ ತಂಡ, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದೆ.

​ಡಾಲ್ಡಾ, ಕೆಮಿಕಲ್ ಬಳಸಿ ತುಪ್ಪ ತಯಾರಿಕೆ:

ದಾಳಿಯ ವೇಳೆ ಡಾಲ್ಡಾ, ವನಸ್ಪತಿ ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ ನಕಲಿ ನಾಟಿ ತುಪ್ಪ ತಯಾರಿಸುತ್ತಿರುವುದು ಕಂಡುಬಂದಿದೆ. ನೈಜ ನಾಟಿ ತುಪ್ಪದಂತೆ ಕಾಣಲು ಹಾಗೂ ಹಳದಿ ಬಣ್ಣ ಬರಲು ಬಣ್ಣದ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬುದು ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ.

​ಹಳ್ಳಿಗಳಲ್ಲಿ ಮಾರಾಟ, 3 ಬೈಕ್ ಜಪ್ತಿ:

ತಯಾರಿಸಿದ ನಕಲಿ ತುಪ್ಪವನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ದು ಶುದ್ಧ ನಾಟಿ ತುಪ್ಪವೆಂದು ನಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಘಟನಾ ಸ್ಥಳದಲ್ಲಿದ್ದ ಬಳ್ಳಾರಿ ನೋಂದಣಿ ಹೊಂದಿರುವ ಮೂರು ದ್ವಿಚಕ್ರ ವಾಹನಗಳನ್ನು (ಬೈಕ್) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

​ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ತನಿಖೆಯಲ್ಲಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News