Share News

ಸಕಲೇಶಪುರ: ತಾಲ್ಲೂಕಿನಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಹಾಗೂ ಪ್ರಾಣಿಗಳ ಸಂಕಷ್ಟ ಮುಂದುವರಿದಿದ್ದು, ಕಣ್ಣು ಕಾಣದ ಕಾಡುಕೋಣವೊಂದು ಕಳೆದ ಮೂರು ವಾರಗಳಿಂದ ಗ್ರಾಮವೊಂದರಲ್ಲಿ ದಾರಿ ಕಾಣದೆ ಪರದಾಡುತ್ತಿರುವ ಭಾವುಕ ಘಟನೆ ಬೆಳಕಿಗೆ ಬಂದಿದೆ.

​ತಾಲ್ಲೂಕಿನ ಚಿಕ್ಕೊಳಲೆ ಗ್ರಾಮದ ಮಾಜಿ ಸಚಿವ ಸಗೀರ್ ಅಹಮದ್ ಅವರ ಕಾಫಿ ತೋಟದ ಬಳಿ ಈ ಕಾಡುಕೋಣ ಆಶ್ರಯ ಪಡೆದಿದೆ.

​ಸಂಕಷ್ಟದಲ್ಲಿ ಕಾಡುಕೋಣ & ಗ್ರಾಮಸ್ಥರಲ್ಲಿ ಭೀತಿ:

ದೃಷ್ಟಿದೋಷದಿಂದ ಬಳಲುತ್ತಿರುವ ಈ ಕಾಡುಕೋಣಕ್ಕೆ ಕಾಡಿಗೆ ಮರಳಿ ಹೋಗಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ. ಅಲೆಯುವಾಗ ಗೋಡೆ ಹಾಗೂ ತಂತಿ ಕಂಬಗಳಿಗೆ ಡಿಕ್ಕಿ ಹೊಡೆದು ಗಾಯಗೊಳ್ಳುತ್ತಿದೆ. ವಾಸದ ಮನೆಯ ಹಿಂಭಾಗದಲ್ಲೇ ಬಂದು ನಿಲ್ಲುತ್ತಿರುವುದರಿಂದ ತೋಟದ ಮಾಲೀಕರು ಹಾಗೂ ಮಹಿಳಾ ಕಾರ್ಮಿಕರು ಕೆಲಸಕ್ಕೆ ತೆರಳಲು ಆತಂಕಪಡುವಂತಾಗಿದೆ.

​ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮನವಿ:

ಸ್ಥಳದಲ್ಲಿದ್ದ ಕಾಡುಕೋಣದ ಸ್ಥಿತಿಯನ್ನು ವೀಡಿಯೋ ಮಾಡಿರುವ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು, ಈ ದೃಶ್ಯವನ್ನು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

​ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಅಸಹಾಯಕ ಸ್ಥಿತಿಯಲ್ಲಿರುವ ಈ ಕಾಡುಕೋಣವನ್ನು ಸುರಕ್ಷಿತವಾಗಿ ಸೆರೆಹಿಡಿದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಅದನ್ನು ದಟ್ಟ ಅರಣ್ಯಕ್ಕೆ ಬಿಡಲು ಅಥವಾ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Share News