ಚಾಮರಾಜನಗರ: ರೈತನ ಮೇಲೆ ದಾಳಿ ನಡೆಸಿ ಕೊಂದು ತಿಂದಿದ್ದ ಭೀಕರ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದಿದ್ದಾರೆ. ಇದರಿಂದ ಕಳೆದ ಹಲವು ದಿನಗಳಿಂದ ಭಯದ ವಾತಾವರಣದಲ್ಲಿದ್ದ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ.
ಚಾಮರಾಜನಗರ ತಾಲೂಕಿನ ತಾವರೆಕಟ್ಟೆ ಮೋಳೆ ಗ್ರಾಮದ ಮರಗದಕೆರೆ ಬಳಿ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ, ಸಾಕಾನೆಗಳಾದ ಕಂಜನ್ ಮತ್ತು ಈಶ್ವರ್ ಸಹಾಯದಿಂದ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಬಂಧಿಸಿದ್ದಾರೆ. ಸೆರೆ ಸಿಕ್ಕ ವ್ಯಾಘ್ರವು ಗಂಡು ಹುಲಿಯಾಗಿದ್ದು, ಸುಮಾರು 6 ರಿಂದ 7 ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.
೧೨ ದಿನಗಳ ನಿರಂತರ ಕಾರ್ಯಾಚರಣೆ:
ಕಳೆದ ಸೆಪ್ಟೆಂಬರ್ 14 ರ ಸಂಜೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ರೈತ ಬಸವಣ್ಣ ಅವರ ಮೇಲೆ ಹುಲಿ ದಾಳಿ ನಡೆಸಿ ಭಕ್ಷಿಸಿತ್ತು. ಈ ಭೀಕರ ಘಟನೆಯ ಬೆನ್ನಲ್ಲೇ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಸೆಪ್ಟೆಂಬರ್ 15 ರಿಂದ ನಿರಂತರವಾಗಿ ಹುಲಿ ಸೆರೆಗಾಗಿ ಜಾಲ ಬೀಸಿದ್ದರು.
೬೫ಕ್ಕೂ ಹೆಚ್ಚು ಸಿಬ್ಬಂದಿ ಶ್ರಮ:
ಹುಲಿ ಸೆರೆ ಕಾರ್ಯಾಚರಣೆಗಾಗಿ 2 ಡ್ರೋನ್ ಕ್ಯಾಮೆರಾಗಳು, ಶ್ವಾನದಳ ಹಾಗೂ ಹುಲಿ ಜಾಡು ಪತ್ತೆಹಚ್ಚುವಲ್ಲಿ ನುರಿತರಾದ 65 ಕ್ಕೂ ಹೆಚ್ಚು ಗಿರಿಜನರು ಮತ್ತು ಅರಣ್ಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ ಮಾಹಿತಿ ನೀಡಿದ್ದಾರೆ.
Arakshakara Times Media
Related posts
