Share News

ಬೆಂಗಳೂರು: ದಕ್ಷಿಣ ಬೆಂಗಳೂರಿನ NH-948 ರಾಷ್ಟ್ರೀಯ ಹೆದ್ದಾರಿಯ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಸರಣಿ ಅಪಘಾತಗಳನ್ನು ತಡೆಯಲು ಮತ್ತು ಸ್ಥಳೀಯರ ಜೀವ ರಕ್ಷಿಸಲು ‘ಕಗ್ಗಲಿಪುರ ಬೈಪಾಸ್’ ರಸ್ತೆ ನಿರ್ಮಿಸುವಂತೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದ್ದಾರೆ.

​ಕಗ್ಗಲಿಪುರ ಹೆದ್ದಾರಿ ಭಾಗದಲ್ಲಿ ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಭೀತಿಯಲ್ಲೇ ಸಂಚರಿಸುವಂತಾಗಿದ್ದು, ಬೈಪಾಸ್ ರಸ್ತೆ ನಿರ್ಮಿಸಬೇಕೆಂಬುದು ಸ್ಥಳೀಯರ ದೀರ್ಘಕಾಲದ ಬೇಡಿಕೆಯಾಗಿತ್ತು. ಈ ಹಿಂದೆ ಸಾರ್ವಜನಿಕರಿಗೆ ನೀಡಿದ್ದ ಅಭಯದಂತೆ ಕಾರ್ಯಪ್ರವೃತ್ತರಾಗಿರುವ ಹೆಚ್.ಡಿ. ಕುಮಾರಸ್ವಾಮಿ, ಯೋಜನೆಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ.

​DPR ಸಿದ್ಧಪಡಿಸಲು ನಿರ್ದೇಶನಕ್ಕೆ ಆಗ್ರಹ:

ಕಗ್ಗಲಿಪುರ ವ್ಯಾಪ್ತಿಯಲ್ಲಿ ತಕ್ಷಣವೇ ಬೈಪಾಸ್ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡುವುದರ ಜೊತೆಗೆ, ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಕ್ತ ನಿರ್ದೇಶನ ನೀಡಬೇಕೆಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ.

​ಕಗ್ಗಲಿಪುರ ಭಾಗದ ಜನರ ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳು ಹಾಗೂ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಕೇಂದ್ರ ಸಚಿವರ ಕಚೇರಿ ತಿಳಿಸಿದೆ.

ವರದಿ : ಗಿಲ್ಬರ್ಟ್. ಜೆ 


Share News