ಬೆಂಗಳೂರು: ರಾಜಧಾನಿಯ ಆನೇಕಲ್ ತಾಲೂಕಿನ ಬಂಡಾಪುರ ಬಳಿಯ ‘ಸಿಪಾನಿ ಅಪಾರ್ಟ್ಮೆಂಟ್’ನಲ್ಲಿ ಟೆಕ್ಕಿಯೊಬ್ಬ ತನ್ನ ಏರ್ ಗನ್ನಿಂದ ಭದ್ರತಾ ಸಿಬ್ಬಂದಿಯ ಮೇಲೆಯೇ ಸಾಲು ಸಾಲು ಗುಂಡಿನ ದಾಳಿ ನಡೆಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಸುಮಾರು ೪೫ ನಿಮಿಷಗಳ ಕಾಲ ಕೃತ್ಯವೆಸಗಿ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಭಯ ಹುಟ್ಟಿಸಿದ್ದ ಆರೋಪಿ ಅನುರಾಗ್ ತಿವಾರಿಯನ್ನು ಸೂರ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಎಂಟು ತಿಂಗಳಿನಿಂದ ಬಾಡಿಗೆಗೆ ವಾಸವಿದ್ದ ಆರೋಪಿ ಅನುರಾಗ್ ತಿವಾರಿ, ಘಟನೆಯ ದಿನ ಮೊಬೈಲ್ನಲ್ಲಿ ಮಾತನಾಡುತ್ತಾ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾನೆ. ತದನಂತರ ದಿಢೀರನೆ ತನ್ನ ಫ್ಲಾಟ್ನ ಬಾಲ್ಕನಿಯಿಂದ ಏರ್ ಗನ್ ಬಳಸಿ ಹೊರಗೆ ಗುಂಡು ಹಾರಿಸಲು ಶುರುಮಾಡಿದ್ದಾನೆ. ಇದನ್ನು ತಡೆಯಲು ಮುಂದಾದ ಸೆಕ್ಯೂರಿಟಿ ಗಾರ್ಡ್ಗಳ ಮೇಲೆಯೂ ಆತ ನೇರವಾಗಿ ಫೈರಿಂಗ್ ನಡೆಸಿದ್ದಾನೆ. ಇದರಿಂದ ಅಪಾರ್ಟ್ಮೆಂಟ್ ನಿವಾಸಿಗಳು ತೀವ್ರ ಭಯಭೀತರಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ಟೆಕ್ಕಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಸ್ತುತ ಆತನಿಂದ ಏರ್ ಗನ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದ್ದು, ಈ ರೀತಿ ಅಸಹಜವಾಗಿ ವರ್ತಿಸಿ ಫೈರಿಂಗ್ ಮಾಡಲು ಕಾರಣವೇನು ಎಂಬುದರ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.