ಬಸ್ ನಿಲ್ದಾಣಗಳು ಹಾಗೂ ರಸ್ತೆಗಳಲ್ಲಿ ಒಂಟಿಯಾಗಿ ತೆರಳುತ್ತಿದ್ದ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್.ಎಂ.ಸಿ.ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ ₹5.85 ಲಕ್ಷ ಮೌಲ್ಯದ 30 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ದೂರು: ಜುಲೈ 06, 2026 ರಂದು ದೂರುದಾರರು ನೀಡಿದ ದೂರಿನ ಪ್ರಕಾರ, ಜುಲೈ 05 ರಂದು ಪೀಣ್ಯದ ಎಂ.ಇ.ಐ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಬೆದರಿಕೆ ಹಾಕಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಬಂಧನ ಹಾಗೂ ತನಿಖೆ: ಜುಲೈ 07, 2026 ರಂದು ಪೀಣ್ಯ ಎಸ್‌ಆರ್‌ಎಸ್ ಸರ್ಕಾರಿ ಡಿಗ್ರಿ ಕಾಲೇಜ್ ಸರ್ವಿಸ್ ರಸ್ತೆ ಬಳಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.
ಮಾಲು ಜಪ್ತಿ: ಜುಲೈ 08 ರಂದು ಆರೋಪಿಗಳನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಚಾಮರಾಜಪೇಟೆ ಮತ್ತು ಡಿ.ಜೆ. ಹಳ್ಳಿಯಲ್ಲಿರುವ ತಮ್ಮ ಮನೆಗಳಲ್ಲಿ ಮಾರಾಟ ಮಾಡಲು ಬಚ್ಚಿಟ್ಟಿದ್ದ 30 ಮೊಬೈಲ್ ಫೋನ್‌ಗಳನ್ನು ಜುಲೈ 09 ರಿಂದ 13 ರ ಅವಧಿಯಲ್ಲಿ ಜಪ್ತಿ ಮಾಡಲಾಯಿತು.
ಪ್ರಸ್ತುತ ಸ್ಥಿತಿ: ಜುಲೈ 14, 2026 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಉತ್ತರ ವಿಭಾಗದ ಡಿಸಿಪಿ ಶ್ರೀ. ಬಿ.ಎಸ್. ನೇಮಗೌಡ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಯಶವಂತಪುರ ಉಪವಿಭಾಗದ ಎಸಿಪಿ ಶ್ರೀ. ಬಿ.ವೈ. ರೇಣುಕಾ ಪ್ರಸಾದ್ ರವರ ನೇತೃತ್ವದಲ್ಲಿ, ಆರ್.ಎಂ.ಸಿ.ಯಾರ್ಡ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಶ್ರೀ. ಟಿ.ಸಿ. ಶಿವಕುಮಾರ್ ಹಾಗೂ ಅವರ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡಿದೆ.