ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಕಾಡುಹಂದಿಯನ್ನು ಅಕ್ರಮವಾಗಿ ಬೇಟೆಯಾಡಿ ಕೊಂದು, ಅದರ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ – ಇಬ್ಬರ ಬಂಧನ:
ಕಗ್ಗಲಿಪುರ ಉಪ ವಲಯ ಅರಣ್ಯಾಧಿಕಾರಿ ಕಾಂಬ್ಳೆ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಯ್ಯ (36) ಹಾಗೂ ಮುತ್ತುರಾಜ್ (19) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
₹ ಮಾಂಸ ಹಾಗೂ ವಾಹನ ಜಪ್ತಿ:
ಬಂಧಿತ ಆರೋಪಿಗಳಿಂದ ಸುಮಾರು 7 ಕೆ.ಜಿ. ತೂಕದ ಕಾಡುಹಂದಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಾಂಸವನ್ನು ಅಕ್ರಮವಾಗಿ ಅಡಗಿಸಿ ಸಾಗಿಸಲು ಬಳಸುತ್ತಿದ್ದ ಸ್ಕೂಟರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ:
ಕಾಡುಹಂದಿ ಬೇಟೆಯಾಡಿ ಕೊಂದು ಅದರ ಮಾಂಸ ಸಾಗಾಟ ಮಾಡಿರುವ ಗಂಭೀರ ಅಪರಾಧದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972’ರ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವನ್ಯಜೀವಿಗಳ ಅಕ್ರಮ ಬೇಟೆ ಮತ್ತು ಸಾಗಾಟವನ್ನು ತಡೆಯಲು ಇಲಾಖೆಯ ವತಿಯಿಂದ ನಿರಂತರ ಕಣ್ಗಾವಲು ಹಾಗೂ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Arakshakara Times Media
Related posts
