ಬೆಂಗಳೂರಿನ ಪಂಚಮಿ ಕಾನೂನು ಮಹಾವಿದ್ಯಾಲಯದ 24ನೇ ವರ್ಷದ ವಾರ್ಷಿಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ, ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಉತ್ಸರ್ಗ’ ಮತ್ತು ವಿಶೇಷ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜೂನ್ 13ರಂದು ಕಾಲೇಜು ಆವರಣದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು.
ವಿಶೇಷ ಆಕರ್ಷಣೆಯಾಗಿ ‘ಪಂಚಮಿ ಪ್ರಪಂಚ’ ಪುಸ್ತಕ ಬಿಡುಗಡೆ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಲೇಖಕ, ನಿರ್ದೇಶಕ ಹಾಗೂ ಆರಕ್ಷಕರ ಟೈಮ್ಸ್ ಮೀಡಿಯಾದ ಸಂಪಾದಕರಾದ ಮೋಹನ್ ಕುಮಾರ್ ಎಸ್ ನಾಯ್ಕ್ ಅವರು ಬರೆದಿರುವ ‘ಪಂಚಮಿ ಪ್ರಪಂಚ’ ಎಂಬ ವಿಶಿಷ್ಟ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಪಂಚಮಿ ಪ್ರಪಂಚ’ ಕೃತಿಯ ವಿಶೇಷತೆ
ಈ ಪುಸ್ತಕವು ಕೇವಲ ಒಂದು ಸಾಮಾನ್ಯ ಸಾಹಿತ್ಯ ಕೃತಿಯಲ್ಲ; ಬದಲಿಗೆ ಲೇಖಕ ಮೋಹನ್ ಕುಮಾರ್ ಎಸ್ ನಾಯ್ಕ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಸ್ವತಃ ಬರೆದು, ಅತ್ಯಂತ ಯಶಸ್ವಿಯಾಗಿ ರಂಗದ ಮೇಲೆ ನಿರ್ದೇಶಿಸಿದ್ದ ಐದು ವಿಶಿಷ್ಟ ಸಾಮಾಜಿಕ ನಾಟಕಗಳ (ಸಂಗ್ರಹ) ರಂಗರೂಪವಾಗಿದೆ. ವರ್ತಮಾನದ ಸಮಾಜ ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳು, ಮಾನವೀಯ ಸಂಬಂಧಗಳ ಏರುಪೇರುಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕಥಾವಸ್ತುವನ್ನು ಈ ಐದೂ ನಾಟಕಗಳು ಒಳಗೊಂಡಿವೆ. ರಂಗಭೂಮಿ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಚಿಂತಕರಿಗೆ ಪ್ರಸ್ತುತ ಸಮಾಜವನ್ನು ವಿಭಿನ್ನ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳಲು ಈ ಕೃತಿ ಕೈಗನ್ನಡಿಯಾಗಿದೆ ಎಂದು ಗಣ್ಯರು ಶ್ಲಾಘಿಸಿದರು.
ಪ್ರತಿಭೋತ್ಸವ ಹಾಗೂ ಬಹುಮಾನ ವಿತರಣೆ
ಇದೇ ವರ್ಷ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪಂಚಮಿ ಪ್ರತಿಭೋತ್ಸವ’ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಗಣ್ಯರ ಹಸ್ತಾಕ್ಷರದಿಂದ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಸೇವೆಗೆ ಸನ್ಮಾನ
ಸಂಸ್ಥೆಯ ಆರಂಭದ ದಿನದಿಂದಲೂ ವ್ಯವಸ್ಥಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತ ಜಗದೀಶ್ ಅವರು ನಿವೃತ್ತಿ ಹೊಂದಿದ್ದಾರೆ. ವಿದ್ಯಾಲಯದ ಏಳಿಗೆಗಾಗಿ ಸಲ್ಲಿಸಿದ ಸುಧೀರ್ಘ ಸೇವೆಗೆ ಮತ್ತು ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹರಸಿ, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳ ನುಡಿ
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ರೊ. ಕೆ ಎಂ ಮಹದೇವಪ್ಪನವರು ಮಾತನಾಡಿ, “ಕಾನೂನು ವಿದ್ಯಾರ್ಥಿಗಳು ಕೇವಲ ಕಾಯ್ದೆ-ಕಾನೂನುಗಳಿಗೆ ಸೀಮಿತವಾಗದೆ, ಇಂತಹ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ‘ಪಂಚಮಿ ಪ್ರಪಂಚ’ದಂತಹ ಕೃತಿಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಲಿದ್ದು, ಬಿಡುಗೊಡೆ ಮಾಡಿದ್ದು ನನ್ನ ಭಾಗ್ಯ” ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷೀಯ ಭಾಷಣ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ ಎಲ್ ವಿದ್ಯಾ ಅವರು ಮಾತನಾಡಿ, “ನಮ್ಮ ಮಹಾವಿದ್ಯಾಲಯವು 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಬೆಳ್ಳಿಹಬ್ಬದತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಮತ್ತು ಅವರ ಸಾಧನೆಯನ್ನು ಪ್ರೋತ್ಸಾಹಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿ, ವಾರ್ಷಿಕೋತ್ಸವ ಹಾಗೂ ಪ್ರತಿಭೋತ್ಸವವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಭಾವನಾತ್ಮಕ ‘ಉತ್ಸರ್ಗ’ ಬೀಳ್ಕೊಡುಗೆ
ಮುಖ್ಯ ಕಾರ್ಯಕ್ರಮದ ನಂತರ, ಕಾಲೇಜಿನ ಅಂತಿಮ ವರ್ಷದ ಸೀನಿಯರ್ಸ್ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ‘ಉತ್ಸರ್ಗ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ಅರ್ಥಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಕಿರಿಯ ವಿದ್ಯಾರ್ಥಿಗಳು ತಮ್ಮ ಸೀನಿಯರ್ಗಳೊಂದಿಗಿನ ನೆನಪುಗಳನ್ನು ಹಂಚಿಕೊಂಡು, ಅವರ ಮುಂದಿನ ವೃತ್ತಿಜೀವನ ಹಾಗೂ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



