ಯಾದಗಿರಿ: ಡಿಜಿಟಲ್ ಪಾವತಿ ಮೂಲಕ ಲಂಚ ಪಡೆಯಲು ಹೋಗಿ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಇಬ್ಬರು ಇಂಜಿನಿಯರ್‌ಗಳು ಲೋಕಾಯುಕ್ತ ಪೊಲೀಸರ ಅತಿಥಿಯಾದ ಘಟನೆ ಜಿಲ್ಲೆಯ ಭೀಮರಾಯನ ಗುಡಿಯಲ್ಲಿ ನಡೆದಿದೆ.
ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಕಚೇರಿಯ ಎಇಇ (AEE) ಮಧುಸೂದನ್ ಮತ್ತು ಜೆಇ (JE) ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಕಾಮಗಾರಿಗಳ ಬಿಲ್ ಪಾಸ್ ಮಾಡಿಕೊಡಲು ಈ ಇಬ್ಬರು ಅಧಿಕಾರಿಗಳು 35 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಲಂಚವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದ ಭ್ರಷ್ಟ ಅಧಿಕಾರಿಗಳು, ಈ ಬಾರಿ ತಾಂತ್ರಿಕತೆಯನ್ನು ಬಳಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. ದೂರುದಾರರಿಂದ ಫೋನ್ ಪೇ (PhonePe) ಮೂಲಕ 35 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಕಾಸೀಂಸಾಬ್ ಗಡ್ಡೆಸೂಗೂರು ಎಂಬುವರು ತಾವು ಮಾಡಿದ ಕಾಮಗಾರಿಯ ಬಿಲ್ ಬಿಡುಗಡೆಗೆ ಇಂಜಿನಿಯರ್‌ಗಳು ಲಂಚ ಕೇಳುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನನ್ವಯ ಲೋಕಾಯುಕ್ತ ಡಿಎಸ್‌ಪಿ ಜೆ.ಎಚ್. ಇನಾಮದಾರ್ ಮತ್ತು ಪಿಐ ಸಿದ್ದರಾಯ ಬಳ್ಳೂರಗಿ ನೇತೃತ್ವದ ತಂಡವು ಭೀಮರಾಯನ ಗುಡಿಯ ಕಚೇರಿಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿತು.
ದಾಳಿಯ ವೇಳೆ ಲಂಚದ ಹಣದ ವರ್ಗಾವಣೆ ದೃಢಪಟ್ಟಿದ್ದು, ಅಧಿಕಾರಿಗಳ ಮೊಬೈಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಡಿಜಿಟಲ್ ಯುಗದಲ್ಲಿ ಲಂಚದ ಹಣವನ್ನು ಮೊಬೈಲ್ ಮೂಲಕ ಪಡೆದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.