ಮೈಸೂರು: ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂರಿನ ಭರತ್ ಹಾಸ್ಪಿಟಲ್ ಆವರಣದಲ್ಲಿ ಆಯೋಜಿಸಲಾಗಿದ್ದ “ತಂಬಾಕು ಬಿಟ್ಟಾಕು” ವಿಶೇಷ ಜಾಗೃತಿ ಅಭಿಯಾನಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್ಪಿ) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಅಧಿಕೃತವಾಗಿ ಚಾಲನೆ ನೀಡಿದರು.
”ತಂಬಾಕು ಬಿಟ್ಟಾಕು – ಆರೋಗ್ಯ ಉಳಿಸಿಕೊ” ಎಂಬ ಪ್ರಬಲ ಸಂದೇಶದೊಂದಿಗೆ ಆರಂಭವಾದ ಈ ಅಭಿಯಾನದಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಾಣದ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಭರತ್ ಹಾಸ್ಪಿಟಲ್ ಮತ್ತು ರೆಡ್ ಎಫ್‌ಎಂ ಸಂಸ್ಥೆಯ ಪ್ರತಿನಿಧಿಗಳು ಹಾಗೂ ನೂರಾರು ಸಾರ್ವಜನಿಕರು ಒಟ್ಟಾಗಿ ಸೇರಿ, ತಂಬಾಕು ಸೇವನೆಯಿಂದ ದೂರವಿರುವಂತೆ ಹಾಗೂ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸುವಂತೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಜೀವನವನ್ನು ಹಾಳುಮಾಡುವ ತಂಬಾಕು ಮತ್ತು ಧೂಮಪಾನದಂತಹ ದುರಭ್ಯಾಸಗಳಿಂದ ಯುವ ಪೀಳಿಗೆ ಹಾಗೂ ಸಾರ್ವಜನಿಕರು ದೂರವಿರಬೇಕು. ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.
