Share News

ರಾಜಧಾನಿಯಲ್ಲಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ಮಾದಕ ಕೃತ್ಯಗಳ ವಿರುದ್ಧ ಕರಾರುವಾಕ್ ಕಾರ್ಯಾಚರಣೆ ಮುಂದುವರಿಸಿರುವ ಜೀವನ ಭೀಮಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಬೃಹತ್ ಪ್ರಮಾಣದ ಅಕ್ರಮ ಇ-ಸಿಗರೇಟ್ ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

​ಇ-ಸಿಗರೇಟ್ ನಿಷೇಧ ಕಾಯ್ದೆಯಡಿ (PECA) ಜೀವನ ಭೀಮಾನಗರ ಪೊಲೀಸರು ನಡೆಸಿದ ಈ ಮಿಂಚಿನ ದಾಳಿಯಲ್ಲಿ, ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದ್ದ ಅಂದಾಜು ₹45 ಲಕ್ಷ ಮೌಲ್ಯದ ನಿಷೇಧಿತ ಇ-ಸಿಗರೇಟ್‌ಗಳು, ವಿವಿಧ ಬ್ರಾಂಡ್‌ಗಳ ವಿದೇಶಿ ಸಿಗರೇಟ್‌ಗಳು ಹಾಗೂ ಹುಕ್ಕಾ ಫ್ಲೇವರ್ ಒಳಗೊಂಡ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಐಟಿ-ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಸರ್ಕಾರದಿಂದ ಸಂಪೂರ್ಣ ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್‌ ಹಾಗೂ ಹುಕ್ಕಾ ಉತ್ಪನ್ನಗಳನ್ನು ಕದ್ದುಮುಚ್ಚಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಜೀವನ ಭೀಮಾನಗರ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಕ್ರಮ ದಂಧೆಯ ಜಾಲಕ್ಕೆ ಭಾರಿ ಪೆಟ್ಟು ನೀಡಿದ್ದಾರೆ.

​ಕಾನೂನುಬಾಹಿರ ಉತ್ಪನ್ನಗಳ ಮಾರಾಟ ಜಾಲದ ವಿರುದ್ಧ ಇಲಾಖೆಯು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈ ದಂಧೆಯ ಹಿಂದೆ ಇರುವ ಪ್ರಮುಖ ಕಿಂಗ್‌ಪಿನ್ ಹಾಗೂ ಪೂರೈಕೆದಾರರ (Suppliers) ಪತ್ತೆಗಾಗಿ ಜಾಲ ಬೀಸಿದ್ದಾರೆ.

 


Share News