Share News

ಕೇರಳ: ಕೇರಳದ ತೃಶೂರ್ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ ಬಿಗ್ ಆಪರೇಷನ್ ‘ಆಪರೇಷನ್ ಟೈಫೂನ್’ (Operation Typhoon) ಕಾರ್ಯಾಚರಣೆಗೆ ಭಾರಿ ಯಶಸ್ಸು ಸಿಕ್ಕಿದ್ದು, ಅಂತರರಾಜ್ಯ ಮಟ್ಟದ ಭಾರಿ ಮಾದಕ ದ್ರವ್ಯ (Drugs) ಜಾಲವನ್ನು ಭೇದಿಸಲಾಗಿದೆ. ಭೇಟೆ ಜಾಲದಲ್ಲಿ ತೊಡಗಿದ್ದ ಇಬ್ಬರು ಯುವತಿಯರು ಸೇರಿದಂತೆ ಏಳು ಜನ ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 308 ಗ್ರಾಂ ಎಂಡಿಎಂಎ (MDMA) ಎಂಬ ಮಾರಕ ಕೆಮಿಕಲ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಪಾಲಕ್ಕಾಡ್ ಜಿಲ್ಲೆಯ ಮುತ್ತಾಲಮಡಾದ ರೆಸಾರ್ಟ್‌ವೊಂದರಲ್ಲಿ ಡ್ರಗ್ ಪಾರ್ಟಿ ಮುಗಿಸಿ ತೃಶೂರ್‌ಗೆ ಐಷಾರಾಮಿ ಕಾರಿನಲ್ಲಿ ಹಿಂತಿರುಗುತ್ತಿದ್ದ ನಾಲ್ವರನ್ನು ವಾಣಿಯಂಪಾರಾ ಚೆಕ್‌ಪೋಸ್ಟ್ ಬಳಿ ಪೊಲೀಸರು ಅನುಮಾನದ ಆಧಾರದ ಮೇಲೆ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಬ್ಬ ಯುವತಿಯು ತನ್ನ ಗುಪ್ತಾಂಗ ಹಾಗೂ ಬಟ್ಟೆಯೊಳಗೆ ರಹಸ್ಯವಾಗಿ ಬಚ್ಚಿಟ್ಟುಕೊಂಡಿದ್ದ 2 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಡ್ರಗ್ ಜಾಲದ ರೋಚಕ ಕಥೆ ಬಯಲಾಗಿದೆ.

ಮೊದಲ ಹಂತದಲ್ಲಿ ಬಂಧಿತರಾದವರು:

​ಶಿಫಾಸ್ (26)

​ಜಿಷ್ಣು (27)

​ವಿದ್ಯಾ (28)

​ಶ್ರೀಲಕ್ಷ್ಮಿ (20)

​ಬಂಧಿತರಿಂದ ಸಿಕ್ಕ ಮಹತ್ವದ ಸುಳಿವು ಆಧರಿಸಿ ಜಿಲ್ಲಾ ಡ್ರಗ್ಸ್ ವಿರೋಧಿ ವಿಶೇಷ ಕಾರ್ಯಪಡೆ (DANSAF) ಕಣಕ್ಕಿಳಿಯಿತು. ಪ್ರಮುಖ ಆರೋಪಿ ಶಿಫಾಸ್ ಬಾಡಿಗೆಗೆ ಇದ್ದ ಮನೆಗೆ ಪೊಲೀಸರು ದಾಳಿ ಮಾಡಿದಾಗ ಅಲ್ಲಿ 13 ಗ್ರಾಂ ಎಂಡಿಎಂಎ ಪತ್ತೆಯಾಯಿತು. ಆದರೆ ಪೊಲೀಸರು ಬರುವ ಮೊದಲೇ ಅವನ ಸ್ನೇಹಿತ ಸುಮೇಶ್ ಎಂಬಾತ ಅಲ್ಲಿಂದ ಭಾರಿ ಪ್ರಮಾಣದ ಡ್ರಗ್ಸ್ ತೆಗೆದುಕೊಂಡು ಪರಾರಿಯಾಗಿದ್ದ ಎಂಬುದು ಗೊತ್ತಾಯಿತು.

​ಖಚಿತ ಮಾಹಿತಿ ಮೇರೆಗೆ ಬೆನ್ನಟ್ಟಿದ ಜಂಟಿ ಪೊಲೀಸ್ ತಂಡ, ಚಾವಕ್ಕಾಡ್ ಬಳಿಯ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವರ್ಕ್‌ಶಾಪ್ (Fabrication Workshop) ಮೇಲೆ ಸಿನೆಮಾ ಶೈಲಿಯಲ್ಲಿ ಭಾರಿ ದಾಳಿ ನಡೆಸಿದೆ. ಅಲ್ಲಿ ಅತ್ಯಂತ ಜಾಣ್ಮೆಯಿಂದ ಅಡಗಿಸಿಟ್ಟಿದ್ದ 288 ಗ್ರಾಂ ತೂಕದ ಎಂಡಿಎಂಎ ಅನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸುಮೇಶ್, ಶಬೀರ್ ಮತ್ತು ಅನ್ಸಾದ್ ಎಂಬ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಳ್ಳಲಾದ ಒಟ್ಟು 308 ಗ್ರಾಂ ಎಂಡಿಎಂಎ ಮಾದಕ ದ್ರವ್ಯದ ಮೌಲ್ಯ 15 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ತೃಶೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

​ಬಂಧಿತ ಎಲ್ಲಾ 7 ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಜಾಲದ ಹಿಂದೆ ಬೆಂಗಳೂರು ಹಾಗೂ ಗೋವಾದ ಲಿಂಕ್ ಇರುವ ಶಂಕೆಯಿದ್ದು, ಆರೋಪಿಗಳ ಮೊಬೈಲ್ ಫೋನ್ ಕರೆಗಳು, ಬ್ಯಾಂಕ್ ಖಾತೆಗಳು ಮತ್ತು ಸಾಮಾಜಿಕ ಜಾಲತಾಣದ ಚಾಟ್ ಹಿಸ್ಟರಿಯನ್ನು ಸೈಬರ್ ಕ್ರೈಂ ಪೊಲೀಸರು ಜಾಲಾಡುತ್ತಿದ್ದಾರೆ.

 


Share News