Share News

ಬೆಂಗಳೂರು: ಸಿಲಿಕಾನ್ ಸಿಟಿಯ ಯಲಹಂಕದ ಅಟ್ಟೂರು ಲೇಔಟ್ ಸಮೀಪದ ದೊಡ್ಡಬೆಟ್ಟಹಳ್ಳಿಯಲ್ಲಿ ಕಾವೇರಿ ನೀರು ಸಂಪೂರ್ಣ ಕಲುಷಿತಗೊಂಡು ಪೂರೈಕೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಬೆಂಗಳೂರು ಜಲಮಂಡಳಿ (BWSSB) ಹಾಗೂ ಖಾಸಗಿ ಗ್ಯಾಸ್ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಗಳಿಗೆ ಮಣ್ಣು ಮಿಶ್ರಿತ ಕಸದ ನೀರು ಸರಬರಾಜಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

ಸ್ಥಳೀಯರ ಆರೋಪದ ಪ್ರಕಾರ, ದೊಡ್ಡಬೆಟ್ಟಹಳ್ಳಿಯಲ್ಲಿ ಖಾಸಗಿ ಗ್ಯಾಸ್ ಕಂಪನಿಯೊಂದು ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡಿತ್ತು. ಈ ವೇಳೆ ಅಜಾಗರೂಕತೆಯಿಂದಾಗಿ ಕಾವೇರಿ ನೀರಿನ ಮುಖ್ಯ ಸಂಪರ್ಕ ಪೈಪ್‌ಲೈನ್‌ಗೆ ಹಾನಿ ಮಾಡಲಾಗಿದೆ. ಒಡೆದ ಪೈಪ್‌ಲೈನ್ ಮೂಲಕ ಗ್ಯಾಸ್ ಪೈಪ್‌ನ ಮಣ್ಣು ಮತ್ತು ಕೊಳಚೆ ನೀರು ಕಾವೇರಿ ನೀರಿನೊಂದಿಗೆ ಮಿಶ್ರಣಗೊಂಡು ನಿವಾಸಿಗಳ ಮನೆ ಸೇರುತ್ತಿದೆ.

ಕಲುಷಿತ ನೀರು ಮನೆಗಳ ಅಂಡರ್‌ಗ್ರೌಂಡ್ ಸಂಪ್ ಹಾಗೂ ಮೇಲ್ಛಾವಣಿಯ ವಾಟರ್ ಟ್ಯಾಂಕ್‌ಗಳಿಗೆ ನೇರವಾಗಿ ಸೇರುತ್ತಿದೆ. ಇದರಿಂದಾಗಿ ಕುಡಿಯಲು, ಅಡುಗೆ ಮಾಡಲು ಹತ್ತಿರದ ಶುದ್ಧ ನೀರಿನ ಘಟಕಗಳಿಗೆ ಅಲೆಯಬೇಕಾದ ಪರಿಸ್ಥಿತಿ ಬಂದೊದಗಿದೆ.

​ಹೆಚ್ಚುವರಿ ಆರ್ಥಿಕ ಹೊರೆ: ಈಗಾಗಲೇ ಸಂಪ್‌ಗಳಿಗೆ ತುಂಬಿರುವ ಗಲೀಜು ನೀರನ್ನು ಹೊರಹಾಕಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸಾರ್ವಜನಿಕರು ಆಳಲು ತೋಡಿಕೊಂಡಿದ್ದಾರೆ.

​ಅಧಿಕಾರಿಗಳ ನಿರ್ಲಕ್ಷ್ಯ: ಗ್ಯಾಸ್ ಕಂಪನಿಯ ಬೇಜವಾಬ್ದಾರಿ ತನ ಹಾಗೂ ಸ್ಥಳದಲ್ಲಿ ಪರಿಶೀಲನೆ ನಡೆಸದ ಜಲಮಂಡಳಿ (BWSSB) ಅಧಿಕಾರಿಗಳ ಬೇಜವಾಬ್ದಾರಿಯೇ ಈ ನರಕಯಾತನೆಗೆ ಕಾರಣ ಎಂದು ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರ ಪ್ರಮುಖ ಬೇಡಿಕೆಗಳು:

​ಹಾನಿಗೊಳಗಾದ ಕಾವೇರಿ ಪೈಪ್‌ಲೈನ್ ಅನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಬೇಕು.

​ಅಲ್ಲಿಯವರೆಗೆ ಇಡೀ ಬಡಾವಣೆಗೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಬೇಕು.

​ಅನುಮತಿ ಇಲ್ಲದೆ ಅಥವಾ ಅಜಾಗರೂಕತೆಯಿಂದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಖಾಸಗಿ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

​ಸಾಂಕ್ರಾಮಿಕ ರೋಗಗಳು ಹರಡುವ ಮುನ್ನವೇ ಜಲಮಂಡಳಿ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸುವುದಾಗಿ ದೊಡ್ಡಬೆಟ್ಟಹಳ್ಳಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

 


Share News