ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದ ವಾರ್ಷಿಕ ಪರಿವೀಕ್ಷಣೆಯ (Inspection) ಅಂಗವಾಗಿ ಬೆಂಗಳೂರಿನ ಸಿ.ಐ.ಡಿ. ವಿಭಾಗದ ಮಾನ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ADGP) ಆದ ಶ್ರೀ ಬಿಜಯ್ ಕುಮಾರ್ ಸಿಂಹ, ಐಪಿಎಸ್ ಅವರು ಇಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಘಟಕಕ್ಕೆ ಅಧಿಕೃತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಡಿ.ಎ.ಆರ್. ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಪೊಲೀಸ್ ಘಟಕದ ವಿವಿಧ ವಿಭಾಗಗಳ ಕಾರ್ಯಕ್ಷಮತೆ ಹಾಗೂ ಪ್ರಗತಿ ಪರಿಶೀಲನೆಗಾಗಿ ಆಗಮಿಸಿದ್ದ ಎಡಿಜಿಪಿ ಬಿಜಯ್ ಕುಮಾರ್ ಸಿಂಹ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆತ್ಮೀಯ ಸ್ವಾಗತ ಕೋರಲಾಯಿತು. ಬಳಿಕ ಡಿ.ಎ.ಆರ್. ಆವರಣವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಅವರು ಸಸಿ ನೆಟ್ಟರು. ಇವರೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಆದ ಶ್ರೀ ಜಿತೇಂದ್ರ ಕುಮಾರ್ ದಾಯ್ಮಾ, ಐಪಿಎಸ್ ಅವರೂ ಸಹ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದರು.
ಸಸಿ ನೆಡುವ ಕಾರ್ಯಕ್ರಮದ ನಂತರ, ಡಿ.ಎ.ಆರ್. ಆವರಣದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕ್ರೀಡಾ ಚಟುವಟಿಕೆಗಳಿಗಾಗಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಟೆನ್ನಿಸ್ ಕೋರ್ಟ್’ ಅನ್ನು ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಬಿಜಯ್ ಕುಮಾರ್ ಸಿಂಹ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದರು.
ಪೊಲೀಸ್ ಸಿಬ್ಬಂದಿಯ ದೈಹಿಕ ಫಿಟ್ನೆಸ್ ಹಾಗೂ ಮಾನಸಿಕ ಉಲ್ಲಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಈ ಹೊಸ ಟೆನ್ನಿಸ್ ಕೋರ್ಟ್ ಸಿಬ್ಬಂದಿಗೆ ವರದಾನವಾಗಲಿದೆ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡಿ.ಎ.ಆರ್. ವಿಭಾಗದ ಹಿರಿಯ ಅಧಿಕಾರಿಗಳು, ಇನ್ಸ್ಪೆಕ್ಟರ್ಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
