ಆನೇಕಲ್: ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ದುರ್ನಾತ ಬೀರುವ ರಸ್ತೆಗಳು ಹಾಗೂ ಮಾಂಸದ ತ್ಯಾಜ್ಯಕ್ಕಾಗಿ ಕಿತ್ತಾಡುವ ಬೀದಿ ನಾಯಿಗಳ ದಂಡು—ಇದು ಆನೇಕಲ್ ತಾಲೂಕಿನ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ದೊಮ್ಮಸಂದ್ರದ ಇಂದಿನ ಶೋಚನೀಯ ಸ್ಥಿತಿ.
ಸರ್ಜಾಪುರ-ಬೆಂಗಳೂರು ರಸ್ತೆಗೆ ಸಮೀಪದಲ್ಲಿರುವ ದೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಗ್ರಾಮದ ಯಾವುದೇ ಮುಖ್ಯ ರಸ್ತೆಗೆ ತೆರಳಿದರೂ ಕಸದ ಗುಡ್ಡೆಗಳೇ ಕಣ್ಣಿಗೆ ಸಿಗುತ್ತಿವೆ. ಸ್ಥಳೀಯ ತರಕಾರಿ, ವ್ಯಾಪಾರ ಮಳಿಗೆಗಳು ಹಾಗೂ ಮಾಂಸದಂಗಡಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಸುರಿಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದ್ದರೂ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಿಲ್ಲ.
ನಿಯಮಿತವಾಗಿ ಕಸ ವಿಲೇವಾರಿಯಾಗದೆ ಕೊಳೆತು ನಾರುತ್ತಿದ್ದು, ಸಾರ್ವಜನಿಕರು ಹಾಗೂ ಹಾದಿಹೋಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯಿತಿಯ ಕಸ ಸಂಗ್ರಹಣಾ ವಾಹನಗಳು ಮನೆ ಬಾಗಿಲಿಗೆ ಬಂದರೂ, ಹಲವರು ವಾಹನಗಳಿಗೆ ಕಸ ನೀಡದೆ ರಸ್ತೆ ಬದಿಯಲ್ಲೇ ಎಸೆಯುತ್ತಿರುವುದು ಪಂಚಾಯಿತಿಗೆ ದೊಡ್ಡ ಸವಾಲಾಗಿದೆ. ಪಂಚಾಯಿತಿಯು ಆಗಾಗ್ಗೆ ತೆರವುಗೊಳಿಸಿದರೂ ಕಸದ ಸಮಸ್ಯೆ ಮರುಕಳಿಸುತ್ತಲೇ ಇದೆ.
ದೊಮ್ಮಸಂದ್ರವು ವರ್ತೂರು, ಕೆ.ಆರ್.ಪುರಂ, ಹೊಸಕೋಟೆ, ಸರ್ಜಾಪುರ ಹಾಗೂ ಚಂದಾಪುರ ಮುಂತಾದ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ದುರ್ನಾತದ ನಡುವೆಯೇ ಪ್ರಯಾಣಿಸಬೇಕಾದ ದುಸ್ಥಿತಿ ಬಂದೊದಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಬೇಕೆಂದು ಸ್ಥಳೀಯ ನಿವಾಸಿಗಳು ತೀವ್ರವಾಗಿ ಒತ್ತಾಯಿಸಿದ್ದಾರೆ.