Share News

ಇತ್ತೀಚೆಗೆ ನಡೆದ ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಭಾರಿ ಯಶಸ್ಸು ಸಾಧಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನಗಳು ಹಾಗೂ ನಗದನ್ನು ಜಪ್ತಿ ಮಾಡಲಾಗಿದೆ.

​ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್ ರವರು ಈ ಪ್ರಮುಖ ಕಾರ್ಯಾಚರಣೆಗಳ ಸುದೀರ್ಘ ಮಾಹಿತಿ ನೀಡಿದರು.

​ವಿವಿಧ ಪ್ರಕರಣಗಳ ವಿವರಗಳು:

​ಡಕಾಯಿತಿ ಪ್ರಕರಣ: ಡಕಾಯಿತಿಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ 1 ಆಟೋ, 2 ಸ್ಕೂಟರ್‌ಗಳು, ಚಿನ್ನದ ಚೈನ್‌ನ ತುಂಡು ಹಾಗೂ ₹30,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

​ಬೈಕ್ ಕಳ್ಳತನ ಜಾಲ ಪತ್ತೆ: ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 2 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹10 ಲಕ್ಷ ಮೌಲ್ಯದ 9 ಮೋಟಾರ್ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

​ಅಪಹರಣ ಮತ್ತು ದರೋಡೆ: ಅಪಹರಣ ಹಾಗೂ ದರೋಡೆ ಎಸಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ, ₹4.30 ಲಕ್ಷ ನಗದು, 2 ಕಾರುಗಳು, 1 ಬೈಕ್ ಮತ್ತು 5 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ವೇಳೆ ಹೆಚ್ಚುವರಿಯಾಗಿ ಮತ್ತೂ 2 ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.

​ಮನೆ ಕಳ್ಳತನ ಭೇದನೆ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ 1 ಆರೋಪಿಯನ್ನು ಬಂಧಿಸಿ, ಆತನಿಂದ ಬರೋಬ್ಬರಿ ₹12 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

​ಪೊಲೀಸ್ ಸಿಬ್ಬಂದಿಗೆ ಶ್ಲಾಘನೆ:

ಕ್ಲಿಷ್ಟಕರವಾಗಿದ್ದ ಈ ಸಾಲು ಸಾಲು ಅಪರಾಧ ಪ್ರಕರಣಗಳನ್ನು ಕ್ಷಿಪ್ರವಾಗಿ ಭೇದಿಸಿ, ಕಳುವಾದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿ, ಪ್ರಶಂಸನಾ ಪತ್ರ ವಿತರಿಸಿದರು.


Share News