ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಪಬ್ಗಳ ಮೇಲೆ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದು, ಪ್ರಸಿದ್ಧ ಚರ್ಚ್ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯ ಪಬ್ಗಳಲ್ಲಿ ಅತ್ಯಂತ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಚರ್ಚ್ಸ್ಟ್ರೀಟ್ನಲ್ಲಿರುವ ‘ಪೆಗ್ ಆ್ಯಂಡ್ ಬಾಟಲ್ಸ್’ (Peg & Bottles) ಪಬ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅತೀವ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಫಂಗಸ್ ಬಂದಿದ್ದ ಮಶ್ರೂಮ್, ಕೀಟಗಳಿದ್ದ ಬೇಬಿ ಕಾರ್ನ್ ಪ್ಯಾಕೆಟ್ಗಳು ಹಾಗೂ ಫೆಬ್ರವರಿಯಲ್ಲೇ ಗಡುವು ಮುಗಿದಿದ್ದ (Expired) ಕ್ರೀಮ್ ಅನ್ನು ಆಹಾರ ತಯಾರಿಕೆಗೆ ಬಳಸುತ್ತಿದ್ದುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಚೀಸ್ ಪ್ಯಾಕೆಟ್ನಲ್ಲಿ ಸತ್ತ ಜಿರಳೆ ಪತ್ತೆಯಾಗಿದ್ದು, ತರಕಾರಿಗಳ ಗುಣಮಟ್ಟವೂ ಅತ್ಯಂತ ಕಳಪೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರದ ಸ್ಯಾಂಪಲ್ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಪಬ್ನ ಕಿಚನ್ಗೆ ಸೀಲ್ ಹಾಕಿ ಪಬ್ಗೆ ಬೀಗ ಜಡಿದಿದ್ದಾರೆ.
ಇತರ ಪಬ್ಗಳ ಮೇಲೂ ತಪಾಸಣೆ — ನೋಟಿಸ್ ಜಾರಿ:
ಕೋಕಸ್ ಪಬ್: ಚರ್ಚ್ಸ್ಟ್ರೀಟ್ನ ‘ಕೋಕಸ್ ಪಬ್’ ಮೇಲೆಯೂ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಳಪೆ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದಾರೆ.
ಬ್ರಿಗೇಡ್ ರಸ್ತೆ ಪಬ್: ಬ್ರಿಗೇಡ್ ರಸ್ತೆಯ ಪಬ್ ಒಂದರ ಮೇಲೆಯೂ FSSAI ಅಧಿಕಾರಿಗಳು ದಾಳಿ ನಡೆಸಿದ್ದು, ಸಾವಿರಾರು ಗ್ರಾಹಕರಿಗೆ ಪೂರೈಸಲಾಗುತ್ತಿದ್ದ ಪನ್ನೀರ್ನಲ್ಲಿ ಸತ್ತ ಜಿರಳೆ ಕಂಡುಬಂದಿದೆ. ಕಿಚನ್ ಪ್ರದೇಶವೂ ಅತ್ಯಂತ ಅಸೌಕರ್ಯ ಹಾಗೂ ಗಲೀಜಿನಿಂದ ಕೂಡಿದ್ದುದು ತಪಾಸಣೆಯಲ್ಲಿ ದೃಢಪಟ್ಟಿದೆ.
ಸಾರ್ವಜನಿಕ ಆರೋಗ್ಯದ ಜೊತೆ ಚೆಲ್ಲಾಟವಾಡುವ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್ಗಳು ಹಾಗೂ ಪಬ್ಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.