ಬೆಂಗಳೂರು: ಮನೆಗಳ ಕಿಟಕಿ ಹಾಗೂ ಹಿಂಬಾಗಿಲು ಮುರಿದು ಸರಣಿ ಕಳವು ಎಸಗುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕೋಣನಕುಂಟೆ ಠಾಣೆ ಪೊಲೀಸರು, ₹18 ಲಕ್ಷ ಮೌಲ್ಯದ 161 ಗ್ರಾಂ ಚಿನ್ನಾಭರಣ ಹಾಗೂ 150 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯು ತನ್ನ ಅಪ್ರಾಪ್ತ ಮಗನೊಂದಿಗೆ ಸೇರಿಕೊಂಡು ಈ ಕೃತ್ಯಗಳನ್ನು ಎಸಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಪ್ರಕರಣದ ಹಿನ್ನೆಲೆ:
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಹಾಗೂ ಕೃಷ್ಣಪ್ಪ ಲೇಔಟ್‌ನಲ್ಲಿ ವಾಸವಿದ್ದ ದೂರುದಾರರು ಆಗಸ್ಟ್ 17 ಮತ್ತು ಆಗಸ್ಟ್ 23ರಂದು ಮನೆಗಳ ಬೀಗ ಮುರಿದು ಕಳವು ನಡೆದಿರುವ ಕುರಿತು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು.
ಆಗಸ್ಟ್ 17ರ ಘಟನೆ: ಪಿಳ್ಳಗಾನಹಳ್ಳಿಯಲ್ಲಿ ಮನೆಯವರು ಕೆಲಸಕ್ಕೆ ತೆರಳಿದ್ದಾಗ ಕಿಟಕಿಯನ್ನು ಹೊಡೆದು ಒಳಪ್ರವೇಶಿಸಿದ್ದ ಖದೀಮರು ಬೀರುವಿನಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿದ್ದರು.
ಆಗಸ್ಟ್ 23ರ ಘಟನೆ: ಕೃಷ್ಣಪ್ಪ ಲೇಔಟ್‌ನಲ್ಲಿ ಮನೆಯ ಹಿಂಬಾಗಿಲಿನ ಮೂಲಕ ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಆಭರಣಗಳನ್ನು ಕದ್ದೊಯ್ದಿದ್ದರು.
ವಿಚಾರಣೆ ಮತ್ತು ಸತ್ತು ವಶ:
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಬಾತ್ಮೀದಾರರ ಮಾಹಿತಿಯನ್ನಾಧರಿಸಿ ಆಗಸ್ಟ್ 26ರಂದು ಹರಿನಗರದಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದರು. ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಸೊತ್ತಿನ ಸುಳಿವು ಸಿಕ್ಕಿದೆ.
ಆರೋಪಿ ನೀಡಿದ ಸುಳಿವಿನ ಮೇರೆಗೆ:
ಹರಿನಗರದ ಆತನ ಮನೆಯಿಂದ 100 ಗ್ರಾಂ ಚಿನ್ನಾಭರಣ
ವೀವರ್ಸ್ ಕಾಲೋನಿಯಲ್ಲಿದ್ದ 2ನೇ ಹೆಂಡತಿಯ ಮನೆಯಿಂದ 150 ಗ್ರಾಂ ಬೆಳ್ಳಿ ವಸ್ತುಗಳು
ಹೆಬ್ಬಗೋಡಿ ಹಾಗೂ ಹರಿನಗರದ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿದ್ದ 61 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ₹18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಾಲಕ ತಾಯಿಯ ವಶಕ್ಕೆ, ಆರೋಪಿ ನ್ಯಾಯಾಂಗ ಬಂಧನಕ್ಕೆ:
ಪ್ರಕರಣದಲ್ಲಿದ್ದ ಅಪ್ರಾಪ್ತ ಮಗನನ್ನು (ಕಾನೂನು ಸಂಘರ್ಷಕ್ಕೊಳಗಾದ ಬಾಲಕ) ಆತನ ತಾಯಿಯಿಂದ ಮುಚ್ಚಳಿಕೆ ಬರೆಯಿಸಿಕೊಂಡು ಆಕೆಯ ವಶಕ್ಕೆ ನೀಡಲಾಗಿದೆ. ಮುಖ್ಯ ಆರೋಪಿಯನ್ನು ಸೆಪ್ಟೆಂಬರ್ 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪೋಲಿಸ್ ತಂಡದ ಯಶಸ್ವಿ ಕಾರ್ಯಾಚರಣೆ:
ನೈಋತ್ಯ ವಿಭಾಗದ ಡಿಸಿಪಿ ಶ್ರೀಮತಿ ಅನಿತಾ ಬಿ. ಹದ್ದಣ್ಣವರ್ (IPS) ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪವಿಭಾಗದ ಎಸಿಪಿ ಶ್ರೀ ಗೋಪಾಲ್ ಡಿ. ಜೋಗೀನ್ ನೇತೃತ್ವದಲ್ಲಿ, ಕೋಣನಕುಂಟೆ ಇನ್‌ಸ್ಪೆಕ್ಟರ್ ಶ್ರೀ ಟಿ.ಟಿ ಕೃಷ್ಣ ಹಾಗೂ ಸಿಬ್ಬಂದಿಗಳ ತಂಡ ಈ ಸರಣಿ ಕಳವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
