Share News

ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳವು ಮಾಡಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯನ್ನು ಸಾರ್ವಜನಿಕರು ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಹೊಸಂಗಡಿಯಲ್ಲಿ ನಡೆದಿದೆ.

​ತಮಿಳುನಾಡಿನ ಮಧುರೈ ಮೂಲದ ಮುತ್ತಾತ್ತ (40) ಬಂಧಿತ ಆರೋಪಿ.

​ಘಟನೆಯ ವಿವರ:

ಬಂಗ್ರಮಂಜೇಶ್ವರ ನಿವಾಸಿ ಪ್ರೇಮಾ (77) ಎಂಬ ವೃದ್ಧೆ ಸಂಬಂಧಿಕರ ಮದುವೆ ಮುಗಿಸಿ ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಹೊಸಂಗಡಿಗೆ ಬರುತ್ತಿದ್ದರು. ಹೊಸಂಗಡಿ ಬಸ್ ಸ್ಟಾಪ್‌ನಲ್ಲಿ ಇಳಿಯುವಾಗ, ಅವರ ಹಿಂಬದಿಯಲ್ಲಿದ್ದ ಚೂಡಿದಾರ್ ಧರಿಸಿದ್ದ ಮುತ್ತಾತ್ತ ಜಾಣತನದಿಂದ 3 ಪವನ್ ಚಿನ್ನದ ಸರವನ್ನು ಕತ್ತರಿಸಲು ಯತ್ನಿಸಿದ್ದಾಳೆ.

​ಇದನ್ನು ಗಮನಿಸಿದ ಮತ್ತೊಬ್ಬ ಸಹಪ್ರಯಾಣಿಕ ಯುವತಿ ತಕ್ಷಣವೇ ವೃದ್ಧೆಯನ್ನು ಎಚ್ಚರಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಹಪ್ರಯಾಣಿಕರು ಹಾಗೂ ಸ್ಥಳೀಯರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ಮಂಜೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

​ಬಂಧಿತ ಮಹಿಳೆಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


Share News