ಬಾದಾಮಿ : ಗಣೇಶ ಹಬ್ಬದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಬಾದಾಮಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ, ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಕೈಯಲ್ಲಿದ್ದ 19 ಕಳ್ಳತನದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಎಸ್ಪಿ, ಹುನಗುಂದ ಡಿವೈಎಸ್ಪಿ ಸಂತೋಷ ಬನಹಟ್ಟಿ, ಬಾದಾಮಿ ಸಿಪಿಐ ಕೆ.ಎಸ್. ಬನ್ನೆ ಹಾಗೂ ಪಿಎಸ್ಐಗಳಾದ ಹಣಮಂತ ಕೆ. ನರಳೆ ಮತ್ತು ಎನ್.ಎಲ್. ವಾಲಿಕಾರ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಅನುಮಾನಾಸ್ಪದ ಕಾರು ತಡೆದು ತಪಾಸಣೆ:
ಸೆಪ್ಟೆಂಬರ್ 25 ರಂದು ಸಂಜೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಸಮೀಪ ಅಪರಾಧ ವಿಭಾಗದ ಪಿಎಸ್ಐ ಎನ್.ಎಲ್. ವಾಲಿಕಾರ ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಂಧ್ರಪ್ರದೇಶಂದ ನೋಂದಾಯಿತ (AP-28 DL-5847) ಸುಜುಕಿ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸಿದರು. ಕಾರಿನಲ್ಲಿದ್ದ ಪುರುಷ ಹಾಗೂ ಮಹಿಳೆಯನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಅವರನ್ನು ಠಾಣೆಗೆ ಕರೆತಂದು ಕಟ್ಟುನಿಟ್ಟಿನ ವಿಚಾರಣೆಗೊಳಪಡಿಸಲಾಯಿತು.
ವಿಚಾರಣೆ ವೇಳೆ ಆರೋಪಿಗಳು ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ 19 ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
₹5.66 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ:
ಆರೋಪಿಗಳಿಂದ ಅಂದಾಜು ₹2.66 ಲಕ್ಷ ಮೌಲ್ಯದ 19 ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹5.66 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಸಂ. 195/2026, ಕಲಂ 303(2) BNS ಹಾಗೂ 38 BNSS) ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪಿಎಸ್ಐ ಎನ್.ಎಲ್. ವಾಲಿಕಾರ ಹಾಗೂ ತಾಂತ್ರಿಕ ವಿಭಾಗ ಸೇರಿ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚಿ ಪ್ರಶಂಸಿಸಿದ್ದಾರೆ.
Arakshakara Times Media
Related posts
