ಬನ್ನೇರುಘಟ್ಟ (ಆನೇಕಲ್): ವಾಹನ ಕಳ್ಳತನವನ್ನೇ ಕಸುಬಾಗಿಸಿಕೊಂಡು ಬನ್ನೇರುಘಟ್ಟ ಹಾಗೂ ಸುತ್ತಮುತ್ತಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕೃತ್ಯ ಎಸಗುತ್ತಿದ್ದ ಕುಖ್ಯಾತ ಅಂತರ್ಜಿಲ್ಲಾ ಕಳ್ಳರ ಮೂವರ ತಂಡವನ್ನು ಬನ್ನೇರುಘಟ್ಟ ಠಾಣೆಯ ಪೊಲೀಸರು ಶುಕ್ರವಾರ ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ನಾಲ್ಕು ಆಟೋಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿವರ:
ಬೆಂಗಳೂರಿನ ಆವಲಹಳ್ಳಿಯ ನಿವಾಸಿಗಳಾದ ಮೊಹಮದ್ ಸಿಖಂದರ್ (23), ಅರ್ಬಾಜ್ (25) ಮತ್ತು ಶಾಹೀದ್ ಅಲಿಖಾನ್ (23) ಬಂಧಿತ ಆರೋಪಿಗಳಾಗಿದ್ದಾರೆ.
ಕಾರ್ಯಾಚರಣೆಯ ಹಿನ್ನೆಲೆ:
ಬನ್ನೇರುಘಟ್ಟ ಸಮೀಪದ ಕಾಳೇಶ್ವರಿ ಗ್ರಾಮದಲ್ಲಿ ನಡೆದಿದ್ದ ಆಟೋ ಕಳವು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ತಾಂತ್ರಿಕ ಹಾಗೂ ಸ್ಥಳೀಯ ಸುಳುಹುಗಳ ಆಧಾರದ ಮೇಲೆ ಕಳ್ಳರ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೆಯ ಅಪರಾಧ ಹಿನ್ನೆಲೆ:
ವಾಹನಗಳನ್ನು ಕಳವು ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದ ಈ ಮೂವರ ವಿರುದ್ಧ ಈ ಹಿಂದೆ ಬೆಂಗಳೂರಿನ ತಲಘಟ್ಟಪುರ, ಪರಪ್ಪನ ಅಗ್ರಹಾರ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸ್ ಠಾಣೆಗಳಲ್ಲೂ ವಿವಿಧ ಕಳವು ಪ್ರಕರಣಗಳು ದಾಖಲಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಸ್ತುತ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ, ಕಾಳೇಶ್ವರಿ ಹಾಗೂ ಎಸ್. ಬಿಂಗಿಪುರ ಪ್ರದೇಶಗಳಲ್ಲಿ ಆಟೋಗಳನ್ನು ಕಳವು ಮಾಡಿರುವ ಆರೋಪ ಇವರ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ತಂಡ:
ಬನ್ನೇರುಘಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆಂಪೇಗೌಡ, ಸಬ್ಇನ್ಸ್ಪೆಕ್ಟರ್ ಸರಸ್ವತಿ ಹಾಗೂ ಸಿಬ್ಬಂದಿಗಳಾದ ಗಂಗಾ ನಾಯಕ್, ಶೇಖರ್, ಶಿವಕುಮಾರ್, ಹನುಮಂತಯ್ಯ, ಸಂಜಯ್, ನರಸಿಂಹ, ಬೀರೇಶ್, ವಸಂತ್ ಮತ್ತು ಸಚಿನ್ ಅವರ ಒಳಗೊಂಡ ತಂಡವು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿತ್ತು.
Arakshakara Times Media
Related posts
