ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ರೀಲ್ಸ್ ಹುಚ್ಚು ಮಿತಿಮೀರುತ್ತಿದ್ದು, ಲೈಕ್ಸ್ ಮತ್ತು ವೀವ್ಸ್‌ಗಾಗಿ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಬಂದೂಕು ಹಿಡಿದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಮೂವರು ಯುವಕರನ್ನು ಬಳ್ಳಾರಿಯ ಕೌಲ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಾಹಿಲ್, ವಿಕಾಸ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ.
ಬಂಧಿತ ಯುವಕರು ಬಳ್ಳಾರಿಯ ಬಂಡಿಹಟ್ಟಿ ಸಮೀಪದ ಎಚ್.ಎಲ್.ಸಿ. (HLC) ಕಾಲುವೆಯ ಮೇಲ್ಭಾಗದಲ್ಲಿ ವಿಡಿಯೋ ಚಿತ್ರೀಕರಣ ನಡೆಸಿದ್ದರು. ಈ ವೇಳೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಹಿಡಿದು ರೌಡಿಸಂ ಶೈಲಿಯಲ್ಲಿ ರೀಲ್ಸ್ ಮಾಡಿದ್ದರು. ತದನಂತರ ಈ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡಿದ್ದರು.
ಈ ನಕಲಿ ಬಂದೂಕಿನ ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೌಲ್ ಬಜಾರ್ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ, ಆರೋಪಿಗಳಾದ ಸಾಹಿಲ್, ವಿಕಾಸ್ ಮತ್ತು ಅಭಿಷೇಕ್ ರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ರೀಲ್ಸ್ ಚಿತ್ರೀಕರಣಕ್ಕೆ ಬಳಸಲಾಗಿದ್ದ ನಕಲಿ ಡಬಲ್ ಬ್ಯಾರೆಲ್ ಬಂದೂಕು ಹಾಗೂ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಸಾರ್ವಜನಿಕ ಶಾಂತಿ ಹಾಗೂ ಸುರಕ್ಷತೆಗೆ ಧಕ್ಕೆ ತರುವಂತಹ, ಮಾರಕಾಸ್ತ್ರಗಳನ್ನು ಪ್ರದರ್ಶಿಸುವ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡರೆ ಕಟ್ಟುನಿಟ್ಟಿನ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯುವಕರು ರೀಲ್ಸ್ ಹುಚ್ಚಿಗೆ ಬಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು.”
— ಕೌಲ್ ಬಜಾರ್ ಪೊಲೀಸ್ ಪ್ರಕಟಣೆ