Share News

ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಮಧ್ಯರಾತ್ರಿ ಯುವಕನೊಬ್ಬ ನುಗ್ಗಿ ಓಡಾಟ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದ್ದು, ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ.

ಮಧ್ಯರಾತ್ರಿ ವೇಳೆ ಹಾಸ್ಟೆಲ್ ಆವರಣದಲ್ಲಿ ಅಪರಿಚಿತ ಯುವಕನನ್ನು ಕಂಡ ವಿದ್ಯಾರ್ಥಿನಿಯರು ಗಾಬರಿಗೊಂಡು ಹಾಸ್ಟೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಹಾಸ್ಟೆಲ್‌ನ ಭದ್ರತಾ ವ್ಯವಸ್ಥೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಸ್ಟೆಲ್‌ಗೆ ನುಗ್ಗಿದ ಯುವಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿನಿಯರ ಸುರಕ್ಷತೆ ಕುರಿತಾಗಿ ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

 


Share News